ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹೈಕೋರ್ಟ್ ನಲ್ಲಿ ಬಿ ಎಸ್ ಯಡಿಯೂರಪ್ಪ ಅವರು ಪ್ರಕರಣ ರದ್ದು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಯಿತು. ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಜನವರಿ 10 ಕ್ಕೆ ಒಂದು ಮುಂದೂಡಿದರು.
ವಿಚಾರಣೆ ಆರಂಭದ ವೇಳೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರು ವಾದ ಮಂಡಿಸಿದರು. ಪೊಲೀಸರು ಕೆಲವು ಸಾಕ್ಷಿಗಳ ಹೇಳಿಕೆಯನ್ನು ಕೋರ್ಟಿಗೆ ಸಲ್ಲಿಸಿಲ್ಲ. ಈ ಹೇಳಿಕೆಗಳು ಆರೋಪ ಪಟ್ಟಿಯ ಭಾಗವಲ್ಲದಿದ್ದರೂ ಕೂಡ ಕೋರ್ಟ್ ತರಿಸಿಕೊಳ್ಳಬಹುದು. ಪೊಲೀಸರ ಕೇಸ್ ಡೈರಿಯ ಕೂಡ ತನಿಖೆಯ ಭಾಗವಾಗಿದೆ ಎಂದು ವಾದಿಸಿದರು. ಈ ವೇಳೆ ವಿಚಾರಣೆ ಜನವರಿ 10 ಕ್ಕೆ ಮುಂದೂಡಿ ಹೈಕೋರ್ಟ ಆದೇಶಿಸಿತು.
ಪ್ರಕರಣದ ಹಿನ್ನೆಲೆ?
ಸಹಾಯ ಕೋರಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ತಾಯಿ ಮಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ಅಪ್ರಾಪ್ತ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಾಲಕಿಯ ತಾಯಿ ಮಾರ್ಚ್ 14, 2024ರಂದು ದೂರು ನೀಡಿದ್ದರು. ಈ ದೂರು ಆಧರಿಸಿ ಬಿಎಸ್ ವೈ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು.
ನಂತರ ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಸಿಐಡಿ ಈ ಕುರಿತು ಚಾರ್ಜ್‌ಶೀಟ್ ಸಲ್ಲಿಸಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 8 (ಲೈಂಗಿಕ ದೌರ್ಜನ್ಯ), ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354A (ಲೈಂಗಿಕ ಕಿರುಕುಳ) ಮತ್ತು 214 ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿದೆ.
ಪ್ರಕರಣದಲ್ಲಿ ಸಂತ್ರಸ್ತೆ 17 ವರ್ಷದ ಬಾಲಕಿ. ಫೆಬ್ರವರಿ 2, 2024ರಂದು ತನ್ನ ತಾಯಿಯೊಂದಿಗೆ ಮಾಜಿ ಮುಖ್ಯಮಂತ್ರಿಯನ್ನು ಅವರ ನಿವಾಸದಲ್ಲಿ ಭೇಟಿಯಾಗಲು ಹೋಗಿದ್ದಳು. ಸಂತ್ರಸ್ತೆ 7 ವರ್ಷದವಳಿದ್ದಾಗ ಆಕೆಯ ಸಂಬಂಧಿಕರೊಬ್ಬರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ಈ ಹಿಂದಿನ ಅತ್ಯಾಚಾರ ಪ್ರಕರಣದ ತನಿಖೆಯನ್ನು ವೇಗಗೊಳಿಸಲು ಅವರ ಸಹಾಯವನ್ನು ತಾಯಿ ಕೋರಿದ್ದರು.
ಆ ಸಂದರ್ಭದಲ್ಲಿ ಬಿಎಸ್‌ವೈ ತಮ್ಮ ಮನೆಯ ಕೊಠಡಿಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮಾರ್ಚ್ 14 ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ವಿಚಾರಣಾ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿತ್ತು. ನಂತರ ಕರ್ನಾಟಕ ಹೈಕೋರ್ಟ್ ಜೂನ್ 14ರಂದು ಬಂಧನಕ್ಕೆ ತಡೆಯಾಜ್ಞೆ ನೀಡಿತ್ತು.