ರಾಮನಗರ : ಕೆಲವು ದಿನಗಳ ಹಿಂದೆ 2028 ರ ವರೆಗೆ ಕಾಂಗ್ರೆಸ್ ಸರ್ಕಾರ ಇರಲ್ಲ, ಬಳಿಕ ನಾನೇ ಮತ್ತೆ ಮುಖ್ಯಮಂತ್ರಿ ಆಗಲಿದ್ದೇನೆ ಎಂದು ಎಚ್ ಡಿ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದರು. ಇದೀಗ ಮತ್ತೊಂದು ಹೊಸ ಬಾಂಬ್ ಸಿಡಿಸಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು, ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದ್ದು ಬಳಿಕ ರಾಜ್ಯಪಾಲರ ಆಳ್ವಿಕೆ ಜಾರಿಯಾಗಬಹುದು ಎಂದು ಸ್ಪೋಟಕ ಹೇಳಿಕೆ ನೀಡಿದರು.
ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಅವರು ಈ ಒಂದು ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ನಾವು ಒಂದು ವೇಳೆ ಗೆದ್ದರೆ ಚುನಾವಣೆಯ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದ್ದು ರಾಜ್ಯಪಾಲರ ಆಳ್ವಿಕೆ ಜಾರಿಯಾಗಬಹುದು ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಮೋದಿ ಹಾಗೂ ದೇವೇಗೌಡರ ನಾಯಕತ್ವಕ್ಕೆ ಬೆಂಬಲ ಸಿಗುವ ವಿಶ್ವಾಸವಿದೆ. ಹಾಗಾಗಿ ಮೂರೂ ಕ್ಷೇತ್ರಗಳಲ್ಲಿ ನಾವು ಗೆಲ್ಲಬೇಕು. ಬಿಎಸ್ ಯಡಿಯೂರಪ್ಪ ಅವರು ಹಬ್ಬ ಮುಗಿದ ಬಳಿಕ ಪ್ರಚಾರಕ್ಕೆ ಬರಲಿದ್ದು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.