ಬೆಂಗಳೂರು : ರಾಜ್ಯ ಸರ್ಕಾರದಿಂದ ಇದೀಗ ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ಗುಡ್ ನ್ಯೂಸ್ ನೀಡಿದೆ. 2026–27ನೇ ಸಾಲಿನಿಂದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ನೀಡಲು ನಿರ್ಧಾರ ಮಾಡಿದೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಬಹಳ ದೊಡ್ಡ ಅನುಕೂಲವಾಗಲಿದೆ.
ಸರ್ಕಾರದ ಈ ಕ್ರಮ ಬಹಳ ಸ್ವೀಕಾರವಾಗಿದೆ. ಪಠ್ಯಪುಸ್ತಕಗಳ ಬೆಲೆ, ಕಾರ್ಯಪುಸ್ತಕಗಳ ಖರೀದಿ, ಶುಲ್ಕ ಇತ್ಯಾದಿ ಖರ್ಚುಗಳಿಂದ ಅನೇಕರು ಒತ್ತಡಕ್ಕೆ ಒಳಗಾಗುತ್ತಾರೆ. ಉಚಿತ ಪಠ್ಯಪುಸ್ತಕಗಳ ವ್ಯವಸ್ಥೆಯಿಂದ ಈ ಭಾರ ಸ್ವಲ್ಪವಾದರೂ ಕಡಿಮೆಯಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಪುಸ್ತಕಗಳ ಕೊರತೆಯಿಂದ ಓದನ್ನು ನಿಲ್ಲಿಸುವ ಪರಿಸ್ಥಿತಿ ಕಡಿಮೆಯಾಗುವ ಸಾಧ್ಯತೆ ಇದೆ. ಈ ಯೋಜನೆಯ ಮುಖ್ಯ ಉದ್ದೇಶ ಪೋಷಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಪೋಷಕರಿಗೆ ಮಕ್ಕಳ ಶಿಕ್ಷಣ ವೆಚ್ಚ ದೊಡ್ಡ ಸಮಸ್ಯೆಯಾಗಿರುತ್ತದೆ. ಹೀಗಾಗಿ ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡುವ ನಿರ್ಧಾರ ಕೈಗೊಂಡಿದೆ.
ಸಂಖ್ಯೆಗಳ ದೃಷ್ಟಿಯಿಂದ ನೋಡಿದರೆ, ಸರ್ಕಾರಿ ಪಿಯು ಕಾಲೇಜುಗಳಲ್ಲಿ ಮೊದಲ ಮತ್ತು ದ್ವಿತೀಯ ವರ್ಷದ ಪಿಯು ತರಗತಿಗಳಲ್ಲಿ ಒಟ್ಟು ಸುಮಾರು 13.17 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅನುದಾನಿತ ಪಿಯು ಕಾಲೇಜುಗಳಲ್ಲಿ ಸುಮಾರು 1.91 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಇವರಿಗೂ ಈ ಯೋಜನೆಯ ಪ್ರಯೋಜನ ಸಿಗಲಿದೆ. 1ರಿಂದ 12ನೇ ತರಗತಿಯವರೆಗಿನ ಪಠ್ಯಪುಸ್ತಕಗಳು ಮತ್ತು ಕಾರ್ಯಪುಸ್ತಕಗಳ ವಿತರಣೆಗೆ ಶಿಕ್ಷಣ ಇಲಾಖೆ ಒಟ್ಟು 30.83 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಸರ್ಕಾರ ಈಗ ಈ ಮೊತ್ತವನ್ನು ಅನುಮೋದಿಸಿದ್ದು, ಯೋಜನೆ ಜಾರಿಗೆ ಬರುವ ದಾರಿ ಸುಗಮವಾಗಿದೆ.
ಕರ್ನಾಟಕದಲ್ಲಿ ಪ್ರಸ್ತುತ 1,319 ಸರ್ಕಾರಿ ಪಿಯು ಕಾಲೇಜುಗಳು ಮತ್ತು 815 ಅನುದಾನಿತ ಪಿಯು ಕಾಲೇಜುಗಳಿವೆ. ಈ ಕಾಲೇಜುಗಳಲ್ಲಿ ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಯೋಜನೆಯಡಿ ಒಟ್ಟು 34 ವಿಷಯಗಳಿಗೆ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತದೆ. ಅಂದರೆ, ನೀವು ಯಾವ ವಿಭಾಗದಲ್ಲಿದ್ದರೂ ಉದಾಹರಣೆಗೆ ಕಲಾ, ವಿಜ್ಞಾನ ಹಾಗು ವಾಣಿಜ್ಯ ವಿಭಾಗ ಆಗಿರಬಹುದು, ನಿಮ್ಮ ವಿಭಾಗದಲ್ಲಿನ ವಿಷಯಗಳಿಗೆ ಸಂಬಂಧಿಸಿದ ಪಾಠಪುಸ್ತಕಗಳನ್ನು ಸರ್ಕಾರವೇ ಉಚಿತವಾಗಿ ಒದಗಿಸುತ್ತದೆ.








