ಬೆಂಗಳೂರು : ಬೇಸಿಗೆಯ ಬಿಸಿಯ ನಡುವೆ ಆರ್ಥಿಕ ಹೊರೆಯ ನಿರೀಕ್ಷೆಯಲ್ಲಿದ್ದ ರಾಜ್ಯದ ಜನತೆಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮುಂಬರುವ ಏಪ್ರಿಲ್ 1ರಿಂದ ವಿದ್ಯುತ್ ದರದಲ್ಲಿ ಯಾವುದೇ ಹೆಚ್ಚಳವಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಕಳೆದ ಕೆಲವು ದಿನಗಳಿಂದ ಎಸ್ಕಾಂಗಳು (ESCOMs) ನಷ್ಟದ ನೆಪವೊಡ್ಡಿ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿವೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದರಿಂದ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿತ್ತು. ಆದರೆ, ವಿಧಾನ ಪರಿಷತ್ತಿನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಎನ್.ಎಸ್. ಬೋಸರಾಜು ಅವರು, “ಗೃಹಬಳಕೆಯ ವಿದ್ಯುತ್ ದರ ಏರಿಕೆ ಮಾಡುವ ಯಾವುದೇ ಉದ್ದೇಶ ಸರ್ಕಾರದ ಮುಂದಿಲ್ಲ” ಎಂದು ತಿಳಿಸುವ ಮೂಲಕ ಈ ಎಲ್ಲಾ ವದಂತಿಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.
ಏಪ್ರಿಲ್‌ನಿಂದ ವಿದ್ಯುತ್ ದರ ಏರಿಕೆ ಸಂಬಂಧ ಯಾವುದೇ ಪ್ರಸ್ತಾವನೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ)ದ ಮುಂದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಪರವಾಗಿ ವಿಧಾನ ಪರಿಷತ್ ಆಡಳಿತ ಪಕ್ಷದ ನಾಯಕ ಬೋಸ್ ರಾಜ್ ತಿಳಿಸಿದ್ದಾರೆ.ಪ್ರತಿ ವರ್ಷ ವಿದ್ಯುತ್ ಸರಬರಾಜು ಕಂಪೆನಿಗಳು ವಾರ್ಷಿಕ ಕಾರ್ಯನಿರ್ವಹಣೆ ಕುರಿತು ಸಭೆ ನಡೆಸಲಿದ್ದು, ಇದರಂತೆ 2024-25ನೇ ಸಾಲಿನಲ್ಲಿ ಸುಮಾರು 4,516 ಕೋಟಿ ರೂ ಆದಾಯ ಕೊರತೆಯಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 2,802 ಕೋಟಿ ರೂ ಕೊರತೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಎಸ್ಕಾಂಗಳಿಂದ ಕೆಇಆರ್ಸಿಗೆ ದರ ಏರಿಕೆ ಕುರಿತಾಗಿ ಈವರೆಗೂ ಯಾವುದೇ ಪ್ರಸ್ತಾವನೆ ಬಂದಿಲ್ಲ. ಇದಕ್ಕೆ ಬದಲಾಗಿ, 2024-25ನೇ ಸಾಲಿನಲ್ಲಿ ಆದಾಯ ಕೊರತೆಯಾಗಿದ್ದು, ಈ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸುಮಾರು 4,516 ಕೋಟಿ ರೂ ಆದಾಯ ಕೊರತೆಯಾಗಿದೆ ಎಂದು ಉಲ್ಲೇಖಿಸಿದೆ ಎಂದು ಸದಸ್ಯ ಸಿ.ಎನ್.ಮಂಜೇಗೌಡ ಅವರ ಪ್ರಶ್ನೆಗೆ ಬೋಸ್ ರಾಜ್ ಉತ್ತರಿಸಿದರು.








