ಉತ್ತರಕನ್ನಡ : ರಾಜ್ಯ ಸರ್ಕಾರಿ ನೌಕರರಿಗೆ ಮುಂದಿನ 2 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಮಾದರಿಯ ವೇತನ ನೀಡುವ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು 2026-27ರ ಅಂತ್ಯದೊಳಗೆ ರಾಜ್ಯ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿಯ ವೇತನವನ್ನು ಜಾರಿಗೆ ತರಲು ಬದ್ಧವಾಗಿದೆ ಎಂದು ತಿಳಿಸಿದರು.
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತನಾಡಿದ ಅವರು, ರಾಜ್ಯದ ನೌಕರರು ನೆಮ್ಮದಿಯಿಂದ ಇರುವಂತೆ ಮಾಡುವುದು ಸಂಘದ ಕರ್ತವ್ಯವಾಗಿದೆ. ಈ ಕಾರಣದಿಂದ ನೌಕರರಿಗೆ ನೀಡುವ ಹಬ್ಬದ ಮುಂಗಡವನ್ನು ಪ್ರಸ್ತುತ ಇರುವ 25 ಸಾವಿರವನ್ನು 50 ಸಾವಿರಕ್ಕೆ ಹೆಚ್ಚಳ ಮಾಡಲು ಪ್ರಯತ್ನಿಸಲಾಗುತ್ತಿದೆ. ಎನ್‌ಪಿಎಸ್ (NPS) ಬದಲಾಗಿ ಒಪಿಎಸ್ (OPS) ಜಾರಿಗೆ ತರುವ ಬಗ್ಗೆ ಸಂಘವು ಸತತ ಪ್ರಯತ್ನ ನಡೆಸಿದೆ ಎಂದರು.
ಮಹಿಳಾ ನೌಕರರಿಗೆ ಋತುಚಕ್ರದ ಸಂದರ್ಭದಲ್ಲಿ ಪ್ರತಿ ತಿಂಗಳು 1ರಂತೆ ವರ್ಷಕ್ಕೆ 12 ವಿಶೇಷ ಸಾಂದರ್ಭಿಕ ರಜೆ ನೀಡುವಂತೆ ಸಂಘ ಮಾಡಿದ ಮನವಿಗೆ ಸರ್ಕಾರವು ಸ್ಪಂದಿಸಿದೆ. ಈ ಪ್ರಸ್ತಾವನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ. ಇದರಿಂದ ರಾಜ್ಯದ 2.25 ಲಕ್ಷ ಮಹಿಳಾ ನೌಕರರಿಗೆ ಅನುಕೂಲವಾಗಲಿದೆ ಎಂದರು.