ದಾವಣಗೆರೆ : ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ, ಅದರಲ್ಲೂ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಮಾಡಲು ಇಚ್ಚಿಸುವ ಅಭ್ಯರ್ಥಿಗಳು ಇನ್ನು ಮುಂದೆ ಕನ್ನಡದಲ್ಲೂ ಪರೀಕ್ಷೆ ಬರೆಯಬಹುದು ಎಂದು ಕೇಂದ್ರ ಸಚಿವರಾದಂತಹ ವಿ.ಸೋಮಣ್ಣ ಅವರು ಘೋಷಣೆ ಮಾಡಿದರು.
ದಾವಣಗೆರೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಕನ್ನಡದಲ್ಲೇ ರೈಲ್ವೇ ಇಲಾಖೆ ಪರೀಕ್ಷೆಗಳನ್ನು ಇಲಾಖೆ ನಡೆಸಲಿದೆ. ಕಳೆದ 40 ವರ್ಷಗಳಿಂದ ಇದ್ದಂತಹ ಬೇಡಿಕೆಯನ್ನು ಇಂದು ಈಡೇರಿಸಲಾಗಿದೆ ಎಂದು ತಿಳಿಸಿದರು.
ರೈಲ್ವೆ ಇಲಾಖೆಯಲ್ಲಿ ಒಟ್ಟು 12 ಲಕ್ಷ ಹುದ್ದೆಗಳಿದ್ದು,15 ಲಕ್ಷ ಜನರು ಪಿಂಚಣಿ ಪಡೆಯುತ್ತಿದ್ದಾರೆ. ಖಾಲಿ ಇರುವ 16 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಆದೇಶ ನೀಡಲಾಗಿದ್ದು, ನಮ್ಮ ರಾಜ್ಯದ ಯುವಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.