ಬೆಂಗಳೂರು: ದೇಶಾದ್ಯಂತ ಉಂಟಾಗಿರುವ ಎಲ್‌ಪಿಜಿ ಕೊರತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಕರ್ನಾಟಕಕ್ಕೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಶೇ.68ಕ್ಕೆ ಹೆಚ್ಚಿಸಲಾಗಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಭಾನುವಾರ ಹೆಚ್ಚುವರಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಆದ್ಯತೆ ಅನುಸಾರವಾಗಿ ಹಂಚಿಕೆ ಪರಿಷ್ಕರಿಸಿದೆ.
ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳು ಆಸ್ಪತ್ರೆ ಮತ್ತು ಇತರೆ ಅವಶ್ಯಕ ಸಂಸ್ಥೆಗಳಿಗೆ 4200 ಸಿಲಿಂಡರ್‌ಗಳು, ಸರ್ಕಾರ/ಪಿ.ಎಸ್.ಯು ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು, ಬಸ್ ನಿಲ್ದಾಣಗಳ ಕ್ಯಾಂಟೀನ್‌ಗಳಿಗೆ 1200, ಹೋಟೆಲ್, ಡಾಬಾ, ರೆಸ್ಟೋರೆಂಟ್, ಕಾರ್ಖಾನೆ, ಕೆಎಂಎಫ್., ಡೇರಿ, ಸಮುದಾಯ ಅಡುಗೆ ಕೇಂದ್ರಗಳು, ಪಿ.ಜಿ, ಕ್ಯಾಂಟೀನ್, ಕ್ರೀಡಾ ವಸತಿ ನಿಲಯಗಳಿಗೆ 17500, ಬೀಜ ಸಂಸ್ಕರಣೆ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು, ಔಷಧೋದ್ಯಮ, ಮೀನುಗಾರಿಕೆ, ಕೋಳಿ ಸಾಕಣೆ, ರೇಷ್ಮೆ ಹುಳು ಸಾಕಣೆಗೆ 6 ಸಾವಿರ, ಇತರ ಅವಶ್ಯಕತೆ ಆಧಾರದ ಮೇಲೆ 563 ಸಿಲಿಂಡರ್ ಸೇರಿದಂತೆ ಒಟ್ಟು 29463 ಸಿಲಿಂಡರ್ ಪ್ರತಿನಿತ್ಯ ಒದಗಿಸಲಾಗುವುದು ಎಂದು ಮುನಿಯಪ್ಪ ವಿವರಿಸಿದ್ದಾರೆ.
ಹೆಚ್ಚು ದರ ವಸೂಲಿ ಮಾಡಿದರೆ ಪರವಾನಗಿ ರದ್ದು
ಸಚಿವ ಆಟೋ ಎಲ್‌ಪಿಜಿ ಮತ್ತು ಇತರ ಸಿಲಿಂಡರ್‌ಗಳ ಪೂರೈಕೆಯು ಹಳೆಯ ಆದೇಶದಂತೆಯೇ ಮುಂದುವರಿಯಲಿದೆ. ಕೆಲವು ಖಾಸಗಿ ವಿತರಕರು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ಮಾಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕಾಳಸಂತೆಯಲ್ಲಿ ಗೃಹಬಳಕೆ ಅಥವಾ ವಾಣಿಜ್ಯ ಸಿಲಿಂಡರ್‌ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ, ಅಂತಹವರ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವ ಮುನಿಯಪ್ಪ ಎಚ್ಚರಿಸಿದ್ದಾರೆ. ಬೆಲೆ ನಿಯಂತ್ರಣ ಮತ್ತು ದುರುಪಯೋಗ ತಡೆಯಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದ್ದು, ಅಕ್ರಮ ತಡೆಗೆ ನಿರಂತರ ದಾಳಿ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.








