ಬೆಂಗಳೂರು : ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 23ನೇ ಕಂತಿನ ಹಣ ಇನ್ನು ಒಂದು ವಾರದಲ್ಲಿ ರಾಜ್ಯದ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ. ಇನ್ನೂ ಒಂದು ವಾರದಲ್ಲಿ ಗೃಹಲಕ್ಷ್ಮಿಯ 23ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆ ಕುರಿತು ರಾಜ್ಯ ಮಟ್ಟದ ಸಮಾವೇಶದ ಪೂರ್ವಭಾವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗೃಹಲಕ್ಷ್ಮಿ ಬ್ಯಾಂಕ್ ಯೋಜನೆಯು ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರಾರಂಭಿಸಲಾಗುತ್ತಿದ್ದು, ಪ್ರತಿಯೊಬ್ಬ ಮಹಿಳೆಯು ಒಂದು ಸಾವಿರ ರೂ.ಗಳಿಂದ ಖಾತೆಯನ್ನು ಪ್ರಾರಂಭಿಸಿ ಪ್ರತಿ ತಿಂಗಳು 200 ರೂಗಳನ್ನು ಉಳಿತಾಯ ಮಾಡಿದರೆ, ಆರು ತಿಂಗಳ ನಂತರ ಮಹಿಳೆಯು 30 ಸಾವಿರ ರೂ.ಗಳಿಂದ 3 ಲಕ್ಷಗಳ ವರೆಗೆ ರಾಷ್ಟ್ರೀಕೃತ ಬ್ಯಾಂಕ್ ದರದಲ್ಲಿ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ನವೆಂಬರ್ 28 ರಿಂದ ‘ಅಕ್ಕ ಪಡೆ’ ಜಾರಿಗೆ
ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಶೋಷಣೆಯನ್ನು ತಡೆಯುವ ನಿಟ್ಟಿನಲ್ಲಿ ಇದೇ ನವೆಂಬರ್ 28 ರಂದು ರಾಜ್ಯದಾದ್ಯಂತ ಪ್ರತಿ ಜಿಲ್ಲೆಯಲ್ಲಿಯೂ ಅಕ್ಕ ಪಡೆ ಪ್ರಾರಂಭವಾಗುತ್ತಿದೆ. ಇದರಲ್ಲಿ ಆರು ಜನ ಮಹಿಳೆಯರು ಕಾರ್ಯನಿರ್ವಹಿಸುತ್ತಾರೆ. ಯಾವುದೇ ಸಂದರ್ಭದಲ್ಲಿಯೂ ಮಹಿಳೆಯರು ಕ್ಯೂಆರ್ ಕೋಡ್ ಆಪ್ ಅಥವಾ ಫೋನ್ ನಂಬರ್ ಮೂಲಕ ಅಕ್ಕಪಡೆಯನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು ಎಂದರು.








