ಬೆಳಗಾವಿ : ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆಯವರು ಅನುಮೋದನೆ ಕೊಟ್ಟಿದ್ದಾರೆ. ಇಂದಿನಿಂದ ಶನಿವಾರದೊಳಗೆ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.
ಇದೇ ವೇಳೆ ಬೆಳಗಾವಿ ಜಿಲ್ಲೆ ವಿಭಜನೆ ಬೆಳವಣಿಗೆಯ ಕುರಿತು ಮಾತನಾಡಿದ ಅವರು, “ಜಿಲ್ಲೆ ವಿಭಜನೆ ಮಾಡಬೇಕು. ಹೊಸ ಜಿಲ್ಲೆ ಘೋಷಿಸೋಣ ಎನ್ನುವ ಮನಸ್ಸಿನಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಗೆ ಬಂದಿದ್ದರು. ಎಲ್ಲರನ್ನೂ ಕರೆದು ಮಾತನಾಡೋಣ ಎಂದಿದ್ದರು. ಎಲ್ಲರೂ ನಿಯೋಗ ತೆಗೆದುಕೊಂಡು ಬಂದಿದ್ದರಿಂದ ಜಿಲ್ಲೆ ವಿಭಜನೆ ಬಗ್ಗೆ ಇನ್ನೂ ಚಿಂತನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನಮ್ಮ ಜಿಲ್ಲೆ 15 ತಾಲೂಕು, 18 ವಿಧಾನಸಭಾ ಕ್ಷೇತ್ರ ಹೊಂದಿದೆ. ಬರುವ ದಿನಗಳಲ್ಲಿ ಹೊಸದಾಗಿ 3 ತಾಲೂಕು ಆಗುವ ಎಲ್ಲ ಲಕ್ಷಣಗಳಿವೆ. 2ರಿಂದ 3 ಜಿಲ್ಲೆ ಮಾಡಬೇಕೆನ್ನುವ ಬಗ್ಗೆ ನನ್ನ ಮತ್ತು ಸತೀಶ ಜಾರಕಿಹೊಳಿ ಅವರ ಮುಂದೆ ಮುಖ್ಯಮಂತ್ರಿಗಳು ಮೊದಲ ದಿನವೇ ಚರ್ಚಿಸಿದ್ದರು. ನಮ್ಮ ತಾಲೂಕು ಜಿಲ್ಲೆ ಆಗಬೇಕು ಅಂತಾ ಎಲ್ಲರೂ ಮುಖ್ಯಮಂತ್ರಿಗಳ ಬಳಿ ನಿಯೋಗ ತೆಗೆದುಕೊಂಡು ಬಂದರು. ಎಲ್ಲರಿಗೂ ಅವರ ತಾಲೂಕು ಜಿಲ್ಲೆ ಆಗಬೇಕು ಎನ್ನುವ ಆಸೆ ಸಹಜ. ಹಾಗಾಗಿ, ಅಳೆದು ತೂಗಿ ಜಿಲ್ಲೆ ವಿಭಜನೆ ಮಾಡುತ್ತಾರೆ ಎಂದು ಹೇಳಿದರು.








