ಬೆಂಗಳೂರು : ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರಿಗೆ ಸರಕಾರ ಸಿಹಿ ಸುದ್ದಿಯೊಂದ್ದನ್ನು ನೀಡಿದ್ದು, 2023ರ ಸೆ.4ರಿಂದ ಪೂರ್ವಾನ್ವಯ ಆಗುವಂತೆ ಮಾಸಿಕ ಕನಿಷ್ಠ ವೇತನ ಮತ್ತು ವ್ಯತ್ಯಾಸವಾಗುವ ತುಟ್ಟಿ ಭತ್ಯೆಯನ್ನು ಪಾವತಿಸಲು ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರಿಗೆ 16,382 ರು. ಮಾಸಿಕ ಕನಿಷ್ಠ ವೇತನ ಹಾಗೂ ಕಾರ್ಮಿಕ ಇಲಾಖೆಯು ಕಾಲಕಾಲಕ್ಕೆ ನಿಗದಿ ಪಡಿಸುವ ವ್ಯತ್ಯಯವಾಗುವ ತುಟ್ಟಿ ಭತ್ಯೆಯನ್ನು ಪಾವತಿಸಬೇಕು. ಸೆಪ್ಟೆಂಬರ್ ತಿಂಗಳಿಂದ ಅನ್ವಯವಾಗುವಂತೆ ಬಾಕಿ ಮೊತ್ತವನ್ನು ಗ್ರಂಥಾಲಯ ಮೇಲ್ವಿಚಾರಕರಿಗೆ ಪಾವತಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯು ಆದೇಶದಲ್ಲಿ ತಿಳಿಸಿದೆ. ಹೀಗಾಗಿ 2023-24ನೇ ಸಾಲಿನ ಸೆಪ್ಟೆಂಬರ್‌ನಿಂದ 16,382 ರು. ಕನಿಷ್ಠ ವೇತನ ಹಾಗೂ ವ್ಯತ್ಯಾಸವಾಗುವ ತುಟ್ಟಿ ಭತ್ಯೆ (ವಿಡಿಎ) 1,542 ರು. ಸೇರಿದಂತೆ ಮಾಸಿಕ 17,924 ರು. ಪಾವತಿಸಲು ಆದೇಶಿಸಲಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪ್ರಿಯಾಂಕ್ ಖರ್ಗೆ, ಗ್ರಂಥಾಲಯ ಮೇಲ್ವಿಚಾರಕರ ಪಾತ್ರ ಮಹತ್ವದ್ದು ಎಂದು ಪರಿಗಣಿಸಿ, ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳಾದ ಅರಿವು ಕೇಂದ್ರಗಳ ಕೆಲಸದ ಸಮಯವನ್ನು 6 ರಿಂದ 8 ಗಂಟೆಗಳಿಗೆ ಏರಿಕೆ ಮಾಡಲಾಗಿದೆ. ಜತೆಗೆ ಮಾಸಿಕ ಕನಿಷ್ಠ ವೇತನವನ್ನು 15,196 ರು. ಬದಲಿಗೆ 16,382.52 ರು. ಗಳಿಗೆ ಹೆಚ್ಚಳ ಮಾಡಿದ್ದು ಮತ್ತು 1542 ರೂ. ವ್ಯತ್ಯಯವಾಗುವ ತುಟ್ಟಿ ಭತ್ಯೆ ಸೇರಿಸಿ ಮಾಸಿಕ 17,924.52 ರೂ. ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.