ಬೆಂಗಳೂರು : ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ನೀಡಲು ನಿಗದಿಗೊಳಿಸಿರುವ ₹1.20 ಲಕ್ಷ ಕನಿಷ್ಠ ಆದಾಯ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸುವ ಸಂಬಂಧ ಶೀಘ್ರದಲ್ಲೇ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಮಂಗಳವಾರ ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಈ ವಿಚಾರ ಪ್ರಸ್ತಾಪಿಸಿದರು. ಆಹಾರ ಭದ್ರತಾ ಕಾಯ್ದೆಯಡಿ ನಗರ ಪ್ರದೇಶದಲ್ಲಿ ಶೇ.50ರಷ್ಟು ಜನಕ್ಕೆ ಬಿಪಿಎಲ್ ಕಾರ್ಡ್ ಕೊಡಬೇಕು. ಪ್ರಸ್ತುತ ಬೆಂಗಳೂರು ನಗರದಲ್ಲಿ ಶೇ.15 ರಷ್ಟೂ ಇಲ್ಲ. ಹೀಗಾಗಿ ಕಾಯ್ದೆ ಪ್ರಕಾರ ಬೆಂಗಳೂರು ನಗರಕ್ಕೆ ಶೇ.50ರಷ್ಟು ಬಿಪಿಎಲ್ ಕಾರ್ಡ್ ಕೊಡಬೇಕು. ಜೊತೆಗೆ ಕನಿಷ್ಠ ಆದಾಯ ಮಿತಿಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 1.24 ಕೋಟಿ ಬಿಪಿಎಲ್ ರೇಷನ್ ಕಾರ್ಡ್‌ಗಳಿವೆ. 4.50 ಕೋಟಿ ಫಲಾನುಭವಿಗಳಿದ್ದಾರೆ. ರಾಜ್ಯದ ಜನಸಂಖ್ಯೆಯ ಶೇ.73ರಷ್ಟು ಮಂದಿ ಫಲಾನುಭವಿಗಳಾಗಿದ್ದಾರೆ. ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಶೇ.52 ದಾಟಿಲ್ಲ. ಪ್ರಗತಿ ಪಥದಲ್ಲಿರುವ ಕರ್ನಾಟಕದಲ್ಲಿ ಫಲಾನುಭವಿಗಳ ಪ್ರಮಾಣ ಜನಸಂಖ್ಯೆಯ ಶೇ.73ರಷ್ಟಿದೆ ಎಂದು ಹೇಳಿದರು.
ಆಡಳಿತ ಸುಧಾರಣಾ ಆಯೋಗವು ಬಿಪಿಎಲ್ ರೇಷನ್ ಕಾರ್ಡ್ ನೀಡಲು ಕನಿಷ್ಠ ಆದಾಯ ಮಿತಿ 3 ಲಕ್ಷ ರು.ಗೆ ಏರಿಸುವ ಪ್ರಸ್ತಾಪವಿಟ್ಟಿದೆ. ರಾಜ್ಯದ ಶೇ.73ರಷ್ಟು ಜನ ಫಲಾನುಭವಿಗಳಿದ್ದರೂ ಹೊಸದಾಗಿ ಬಿಪಿಎಲ್ ಕಾರ್ಡ್‌ಗೆ ಅರ್ಜಿಗಳು ಬರುತ್ತಿವೆ. ಈ ನಡುವೆ ಕೇಂದ್ರ ಸರ್ಕಾರವು ರಾಜ್ಯದಲ್ಲಿ 7.76 ಲಕ್ಷ ಕಾರ್ಡ್‌ಗಳು ಬಿಪಿಎಲ್ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಮರುಪರಿಶೀಲಿಸಿ ಎಪಿಎಲ್ ಕಾರ್ಡ್ ವ್ಯಾಪ್ತಿಗೆ ತನ್ನಿ ಎಂದು ಸೂಚಿಸಿದೆ. ಅದರಂತೆ ಈಗಾಗಲೇ ರಾಜ್ಯದಲ್ಲಿ ಶೇ.50ರಷ್ಟು ಬಿಪಿಎಲ್ ಕಾರ್ಡ್‌ಗಳ ಪರಿಶೀಲನೆ ಆಗಿದೆ. ಉಳಿದದ್ದನ್ನು ಪರಿಶೀಲಿಸಿ ಎಪಿಎಲ್ ಕಾರ್ಡ್ ವ್ಯಾಪ್ತಿಗೆ ತರಲಿದ್ದೇವೆ ಎಂದರು.








