ಬೆಂಗಳೂರು : ಕಳೆದ ಬಿಗ್ ಬಾಸ್ ಸೀಸನ್ 11 ರಲ್ಲಿ ಇದೇ ನನ್ನ ಕೊನೆಯ ಬಿಗ್ ಬಾಸ್ ಎಂದು ನಟ ಕಿಚ್ಚ ಸುದೀಪ್ ಹೇಳಿ ಎಲ್ಲರಿಗೂ ಶಾಕ್ ನೀಡಿದ್ದರು. ಆದರೆ ಇದೀಗ ಬಿಗ್ ಬಾಸ್ ಸೀಸನ್ 12 ಸೆಪ್ಟೆಂಬರ್ 28 ರಿಂದ ಗ್ರಾಂಡ್ ಓಪನಿಂಗ್ ಆಗಲಿದ್ದು ಇದಕ್ಕೆ ಇದೀಗ ಮತ್ತೆ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ.
ಹೌದು ಈಗಾಗಲೇ ಕನ್ನಡದಲ್ಲಿ 11 ಸೀಸನ್ಗಳು ಯಶಸ್ವಿಯಾಗಿ ಮುಗಿದಿವೆ. ಈಗ 12ನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೀಘ್ರದಲ್ಲೇ ಆರಂಭ ಆಗಲಿದೆ. ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲು ಸಜ್ಜಾಗಿದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರ ಆಗಲಿದ್ದು, ಈಗ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪ್ರೋಮೋ ಬಂದಿದೆ.
ಕರ್ನಾಟಕದಲ್ಲಿ ಸಖತ್ ವೈವಿದ್ಯತೆ ಇದೆ. ಊಟ, ಉಡುಗೆ, ಅಭಿರುಚಿಯಲ್ಲೂ ತುಂಬ ವೈವಿದ್ಯತೆ ಇದೆ. ಕೆಲವರಿಗೆ ಸುದ್ದಿ ಇಷ್ಟ, ಇನ್ನು ಕೆಲವರಿಗೆ ಸಿನಿಮಾ ಇಷ್ಟ. ಮತ್ತೆ ಕೆಲವರಿಗೆ ಕ್ರೀಡೆ ಇಷ್ಟ. ಆದರೆ ಎಲ್ಲರನ್ನೂ ಒಂದಾಗಿಸುವ ಶಕ್ತಿ ಇರುವುದು ಬಿಗ್ ಬಾಸ್ ಶೋಗೆ ಮಾತ್ರ ಎಂದು ಈ ಪ್ರೋಮೋದಲ್ಲಿ ಹೇಳಲಾಗಿದೆ.
‘ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಸ್ವಾಗತ’ ಎಂಬ ಧ್ವನಿಯೊಂದಿಗೆ ಕಿಚ್ಚ ಸುದೀಪ್ ಅವರು ಎಂಟ್ರಿ ನೀಡಿದ್ದಾರೆ. ಅವರನ್ನು ಪ್ರೋಮೋದಲ್ಲಿ ನೋಡಿ ಅಭಿಮಾನಿಗಳಿಗೆ ಬಹಳ ಖುಷಿ ಆಗಿದೆ. ‘ಹೊಸ ಸೆಟ್ ರೆಡಿ ಆಗಿದೆ, ಹೊಸ ಸ್ಪರ್ಧಿಗಳು ಕೂಡ ರೆಡಿ, 7 ಕೋಟಿ ಕನ್ನಡಿಗರೂ ರೆಡಿ. ಸರ್ ನೀವು ರೆಡಿನಾ’ ಎಂದು ಸುದೀಪ್ ಅವರಿಗೆ ಕೇಳಲಾಗಿದೆ. ಎಂದಿನ ಗತ್ತಿನಲ್ಲಿ ಸುದೀಪ್ ಕೂಡ ‘ರೆಡಿ..’ ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.