ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ವರ್ಣಾರ್ಭಟದಿಂದ ಸಂಪೂರ್ಣ ಜನಜೀವನವೇ ಅಸ್ತವ್ಯಸ್ತವಾಗಿದೆ. ಹಾಗಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಚಿವರು ಶಾಸಕರು ಸೇರಿದಂತೆ ಅಧಿಕಾರಿಗಳು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆಹಾನಿ ಪರಿಶೀಲನೆ ನಡೆಸಿದ ಬಳಿಕ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಹವಾಮಾನ ಬದಲಾವಣೆಯಿಂದ ಅತಿ ಹೆಚ್ಚು ಮಳೆಯಾಗಿದೆ. ಬಿಟಿಎಂ ಲೇಔಟ್ ನಲ್ಲಿ ವಿದ್ಯುತ್ ಹರಿದು ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಇನ್ಮುಂದೆ ಬೇಸ್ಮೆಂಟ್ ನಿರ್ಮಿಸುವುದಕ್ಕೆ ಅವಕಾಶ ನೀಡಬಾರದು. ತಗ್ಗು ಪ್ರದೇಶದಲ್ಲಿ ಬೇಸ್ಮೆಂಟ್ ನಿರ್ಮಿಸಲು ಅವಕಾಶ ನೀಡಬಾರದು. 166 ಸೂಕ್ಷ್ಮ ಅತಿ ಸೂಕ್ಷ್ಮ ಪ್ರದೇಶಗಳು ಅಂತ ಗುರುತಿಸಲಾಗಿದೆ. ಎಷ್ಟೇ ಪ್ರಭಾವಿಗಳಿದ್ದರೂ ರಾಜಕಾಲುವೇ ಒತ್ತುವರಿತರೆಗೆ ಸೂಚಿಸಿದ್ದೇನೆ. ಕೋರ್ಟ್ ನಿಂದ ತಡೆಯಾಜ್ಞೆ ತಂದ ಕಡೆ ಮಾತ್ರ ವಿಳಂಬ ಮಾಡಲಾಗಿದೆ ಎಂದರು.
ಪಣತ್ತೂರು ಗಾರ್ಡನ್ನಲ್ಲೂ ಮಳೆ ನೀರು ಸರಿಯಾಗಿ ಹರಿಯುತ್ತಿಲ್ಲ. ಪಣತ್ತೂರು ಗಾರ್ಡನ್ನಲ್ಲಿ ರಸ್ತೆ ಅಗಲೀಕರಣ ಮಾಡಬೇಕಿದೆ. ಹೊಸ ತಂತ್ರಜ್ಞಾನ ಬಳಸಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಮಳೆಹಾನಿ ಬಗ್ಗೆ ಪರಿಶೀಲಿಸಿದ್ದೇವೆ. ಕಳೆದ ಬಾರಿಯೂ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಪರಿಶೀಲನೆ ನಡೆಸಿದ್ದೆ. ಸಿಲ್ಕ್ ಬೋರ್ಡ್ ಜಂಕ್ಷನ್ ಗೆ ನಾಲ್ಕು ಕಡೆಯಿಂದ ನೀರು ಹರಿಯುತ್ತೆ. ಗುರಪ್ಪನಪಾಳ್ಯದಲ್ಲೂ ಮಳೆ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ತಡೆಗೋಡೆ ನಿರ್ಮಿಸಿದ್ದಾರೆ ಅದು ಕುಸಿದು ಮನೆಗಳಿಗೆ ನೀರು ನುಗ್ಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಜಕಾಲುವೆಗಿಂತ ತಗ್ಗು ಪ್ರದೇಶದಲ್ಲಿ ಸಾಯಿ ಲೇಔಟ್ ನಿರ್ಮಿಸಲಾಗಿದೆ. ಹೀಗಾಗಿ ಸಾಯಿ ಲೇಔಟ್ ನಲ್ಲಿ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಮಳೆ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಸಾಯಿ ಲೇಔಟ್ ನಲ್ಲಿ ನೀರು ಸರಾಗವಾಗಿ ಹರಿದರೆ ಮನೆಗೆ ನೀರು ನುಗ್ಗುವುದಿಲ್ಲ. ಮಳೆಯಿಂದ ಹಾನಿಯಾದ ಪ್ರದೇಶಗಳಲ್ಲಿ ಇಂದು ಪರಿಶೀಲಿಸಿದ್ದೇವೆ. ನಾನು ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸಚಿವರು ಶಾಸಕರು ಹಾಗೂ ಅಧಿಕಾರಿಗಳು ಪರಿಶೀಲಿಸಿದ್ದೇವೆ ಎಂದು ತಿಳಿಸಿದರು.