ಕೇರಳ : ಕೇರಳದಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಪ್ರವಾಸಕ್ಕೆ ತೆರಳಿದ್ದ ಬಸ್ ಒಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಸ್ ನಲ್ಲಿದ್ದ ಇನ್ನೂ ಹಲವು ಪ್ರಯಾಣಿಕರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ನಡೆದಿದೆ.
ಕೇರಳ ರಾಜ್ಯದ ಇಡುಕ್ಕಿ ಸಮೀಪ ಈ ಒಂದು ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಗಾಯಗೊಂಡ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾವೇಲಿಕ್ಕಾರದಿಂದ ತಂಜಾವೂರಿಗೆ ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗರ ಗುಂಪನ್ನು ಬಸ್ಸು ಹೊತ್ತೊಯ್ಯುತ್ತಿತ್ತು.ಪ್ರವಾಸಿ ತಂಡ ಹಿಂತಿರುಗುತ್ತಿದ್ದ ವೇಳೆ ಬಸ್ ಅಪಘಾತಕ್ಕೀಡಾಗಿದೆ. ತಿರುವಿನಲ್ಲಿ ಬಸ್ ನಿಯಂತ್ರಣ ತಪ್ಪಿ 30 ಅಡಿ ಆಳದ ಕಮರಿಗೆ ಉರುಳಿದೆ ಎಂದು ವರದಿಯಾಗಿದೆ. ಅದು ಇಳಿಜಾರಿನಲ್ಲಿದ್ದ ಮರಗಳಲ್ಲಿ ಸಿಲುಕಿಕೊಂಡಿತು. ಬಸ್‌ನಲ್ಲಿ 34 ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಇದ್ದರು.
ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.ಪೀರುಮೇಡು ಮತ್ತು ಮುಂಡಕ್ಕಯಂನಿಂದ ಅಗ್ನಿಶಾಮಕ ದಳದ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಭಾನುವಾರ ಬೆಳಗ್ಗೆ ತಂಜಾವೂರಿಗೆ ತೆರಳಿದ್ದ ಬಸ್ ಸೋಮವಾರದ ವೇಳೆಗೆ ವಾಪಸ್ ಬರಬೇಕಿದ್ದ ವೇಳೆ ಅಪಘಾತ ಸಂಭವಿಸಿದೆ.