ದಾವಣಗೆರೆ / ಉಡುಪಿ : ಯುಗಾದಿ ಹಬ್ಬಕ್ಕೆಂದು ಸ್ವಂತ ಊರಿಗೆ ತೆರಳುತ್ತಿರುವಾಗಲೇ ಎರಡು ಪ್ರತ್ಯೇಕ ಭೀಕರ ಪ್ರಧಾನದಲ್ಲಿ ಇಬ್ಬರು ಯುವಕರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಉಡುಪಿ ಹಾಗೂ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೀರೂರು ಹಾಗೂ ಸಮ್ಮಸಗಿ ರಾಜ್ಯ ಹೆದ್ದಾರಿಯ ಗುಳ್ಳೇಹಳ್ಳಿಯ ಕೂಗಳತೆಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಅರ್ಜುನ್ ನಾಯ್ಕ (25), ಹರೀಶ್ ನಾಯ್ಕ (31) ಮೃತ ಯುವಕರು ಎಂದು ತಿಳಿದುಬಂದಿದೆ.
ಯುಗಾದಿ ಹಬ್ಬ ಇರುವ ಕಾರಣ ತಮ್ಮ ದ್ವಿಚಕ್ರ ವಾಹನದಲ್ಲಿ ಯುವಕರು ಊರಿಗೆ ಮರಳುವ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಹೋಗಿದೆ. ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಚನ್ನಗಿರಿ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಉಡುಪಿಯಲ್ಲಿ ಕಾರು ಹಾಗೂ ಬಸ್ರೂರು ಸಮೀಪದ ಬಿ.ಹೆಚ್.ನಿಂದ ಕಂಡ್ಲೂರಿನತ್ತ ತೆರಳುತ್ತಿದ್ದ ಸ್ಕೂಟಿ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಾಜೀವ ಶೆಟ್ಟಿ (55) ಹಾಗೂ ಸುಧೀರ ದೇವಾಡಿಗ (35) ಎನ್ನುವವರು ಸಾವನ್ನಪ್ಪಿದ್ದಾರೆ. ಅಪಘಾತದ ಕುರಿತಂತೆ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.