ಉಡುಪಿ : ಉಡುಪಿ ವಿಧಾನಸಭಾ ಕ್ಷೇತ್ರದಿಂದ ನಾನು ಮೂರು ಬಾರಿಗೆ ಗೆದ್ದಿದ್ದೇನೆ.ಇನ್ನೊಂದು ಬಾರಿ ವಿಧಾನಸಭೆಗೆ ಸ್ಪರ್ಧಿಸಬೇಕು ಎಂದು ನಿರ್ಧರಿಸಿದ್ದೇನೆ. ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ. ಬಿಜೆಪಿಯಲ್ಲಿ ನಿಲ್ಲಬಹುದು ಅಥವಾ ಪಕ್ಷೇತರನಾಗಿ ಸ್ಪರ್ಧಿಸಬಹುದು ಎಂದು ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್ ಘೋಷಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ವಿಧಾನಸಭಾ ಕ್ಷೇತ್ರದಿಂದ ನಾನು ಮೂರು ಬಾರಿಗೆ ಗೆದ್ದಿದ್ದೇನೆ. ಇನ್ನೂ ಮೂರುವರೆ ವರ್ಷ ಇದೆ. ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂದು ಮುಂದೆ ನಿರ್ಧರಿಸುತ್ತೇನೆ.ಪಕ್ಷ ಕರೆದರೆ ನಾನು ಬಿಜೆಪಿಗೆ ಸೇರುತ್ತೇನೆ. ಸದ್ಯದ ಬೆಳವಣಿಗೆಗಳನ್ನು ನೋಡುತ್ತಿರುವಾಗ ಬಿಜೆಪಿಗೆ ನನ್ನ ಅವಶ್ಯಕತೆ ಇಲ್ಲ ಅಂತ ಅನ್ನಿಸಿರಬೇಕು. ಹಾಗಾಗಿ ಬಿಜೆಪಿ ನನ್ನನ್ನು ಆಹ್ವಾನಿಸುತ್ತಿಲ್ಲ ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ನಾನು ಮೂರು ಬಾರಿ ಶಾಸಕನಾಗಿದ್ದವನು. ಬಿಜೆಪಿ ನನ್ನನ್ನು ಯಾವ ರೀತಿ ನೋಡಿಕೊಳ್ಳುತ್ತಿದೆ ಎಂದು ನೆನೆದರೆ ಬೇಸರವಾಗುತ್ತದೆ. ಬಿಜೆಪಿಯ ಇತರ ನಾಯಕರು ಕೂಡ ಈ ಬಗ್ಗೆ ಯೋಚನೆ ಮಾಡಿಲ್ಲ. ನನ್ನ ಬೆಳವಣಿಗೆಯಲ್ಲಿ ಬಿಜೆಪಿಯ ಪಾತ್ರ ಇದೆ. ಹಾಗಾಗಿ ಆ ತತ್ವದಲ್ಲಿ ಇದ್ದೇನೆ. ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಯೋಜನೆ ಪ್ರಗತಿ ಇಲ್ಲ. ಅಭಿವೃದ್ಧಿ ಕಾರ್ಯಗಳಲ್ಲಿ ಯಾರಿಗಾದರೂ ಕಿಕ್ ಬ್ಯಾಕ್ ಸಿಗುತ್ತಾ? ನಾನು ಹೋರಾಟ ಸಂಘಟನೆಗಳಿಂದಲೇ ರಾಜಕೀಯಕ್ಕೆ ಬಂದವನು. ಇದಕ್ಕೆಲ್ಲ ನಾನು ಹೆದರಿ ಕುಳಿತುಕೊಳ್ಳುವವನಲ್ಲ. ಇದರಿಂದ ಜನರಿಗೆ ಅಡ್ಡಿಯಾಗುತ್ತಿದೆ. ನಾನು ನನ್ನ ವ್ಯವಹಾರದಲ್ಲಿ ಬಿಸಿಯಾಗಿದ್ದೇನೆ ಎಂದು ತಿಳಿಸಿದರು.