ಹೊಸಪೇಟೆ : ಹಂಪಿ ಉತ್ಸವ ಉದ್ಘಾಟನಾ ಸಮಾರಂಭದ ವೇದಿಕೆ ಬಳಿ ನಿನ್ನೆ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪಟಾಕಿಯಿಂದ ಬೆಂಕಿ ಹೊತ್ತಿಕೊಂಡಿದ್ದು, ಯಾರಿಗೂ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಸಿಎಂ ಸಿದ್ದರಾಮಯ್ಯ ಅವರಿದ್ದ ಮುಖ್ಯ ವೇದಿಕೆಯ ಎದುರೇ ಬೆಂಕಿ ಹೊತ್ತಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಪೂಜೆ ಸಲ್ಲಿಸುವ ವೇಳೆಯೇ ಕ್ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಥಳದಲ್ಲೇ ಇದ್ದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಉತ್ಸವದಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಬಂದ ಸಮಯದಲ್ಲಿ ಪಟಾಕಿ ಸಿಡಿಸಲಾಗಿದೆ.
ಈ ವೇಳೆ ಬೆಂಕಿ ಕಿಡಿಗಳು ಹುಲ್ಲು ಹಾಗೂ ಸಮೀಪದ ವಸ್ತುಗಳಿಗೆ ತಗುಲಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ವೇದಿಕೆಯ ಸಮೀಪವೇ ಬೆಂಕಿ ಮತ್ತು ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ನೆರೆದಿದ್ದ ಸಾವಿರಾರು ಪ್ರೇಕ್ಷಕರು ಹಾಗೂ ಗಣ್ಯರು ಆತಂಕಗೊಂಡಿದ್ದಾರೆ. ಆದರೆ, ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಸಕಾಲಕ್ಕೆ ಸಿಬ್ಬಂದಿ ಎಚ್ಚೆತ್ತಿದ್ದರಿಂದ ಸಂಭವಿಸಬಹುದಾದ ದೊಡ್ಡ ಅನಾಹುತವೊಂದು ತಪ್ಪಿದೆ.








