ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿರುವಂತಹ ಶ್ರೀ ಕೃಷ್ಣದೇವರಾಯ ಸಮಾಧಿಯ ಮೇಲೆ ಮಾಂಸ ಶುದ್ಧೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹೌದು ಮಾಂಸ ಶುದ್ಧೀಕರಣ ಮಾಡಿದ ಮೂವರ ವಿರುದ್ಧ FIR ದಾಖಲಾಗಿದೆ. ಆನೆಗೊಂದಿ ಗ್ರಾಮದ ಹನುಮಂತ ಹಾಗು ಇನ್ನಿಬ್ಬರ ವಿರುದ್ಧ ಕೊಪ್ಪಳ ಜಿಲ್ಲೆಯ ಗಂಗಾವತಿ ಗ್ರಾಮಾಂತರ ಠಾಣೆಯಲ್ಲಿ ಮೂವರ ವಿರುದ್ಧ FIR ದಾಖಲಾಗಿದೆ.
ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ತಕ್ಷಣವೇ ಸ್ಪಂದಿಸಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು.ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ತಿಳಿವಳಿಕೆ ಇಲ್ಲದೆ ಕೆಲವು ಮಂದಿ ಈ ತಪ್ಪನ್ನು ಎಸಗಿರುವುದು ತಿಳಿದುಬಂದಿದೆ. ಐತಿಹಾಸಿಕ ತಾಣದ ಬಳಿ ಈ ರೀತಿ ಮಾಂಸ ಕಟ್ ಮಾಡುವುದು ಅಕ್ಷಮ್ಯ ಅಪರಾಧವಾಗಿದ್ದು, ಅಲ್ಲಿನ ಸ್ಥಳೀಯರಿಗೆ ತಿಳುವಳಿಕೆ ಹೇಳಿ ಎಚ್ಚರಿಕೆ ನೀಡಲಾಗಿದೆ.
ಬಳಿಕ ಹಂಪಿ ಸ್ಮಾರಕಗಳ ಬಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರನ್ನು ಕಳುಹಿಸಿ ಸದರಿ ಸ್ಥಳವನ್ನು ಸ್ವಚ್ಛ ಮಾಡಿಸಲಾಗಿದೆ. ಮುಂದುವರೆದು, ಇಲಾಖೆಯ ದಿನಗೂಲಿ ನೌಕರರನ್ನು ತಾತ್ಕಾಲಿಕವಾಗಿ ಸದರಿ ಸ್ಮಾರಕದ ಸ್ವಚ್ಛತೆ ಮತ್ತು ಕಾವಲಿಗಾಗಿ ನಿಯೋಜಿಸಲಾಗಿರುತ್ತದೆ ಎಂದು ಕಮಲಾಪುರದ ಪುರಾತತ್ತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.