ಬೆಂಗಳೂರು : ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಕೆಲಸ ಕೊಡಿಸುವುದಾಗಿ ಹೇಳಿ ಖದೀಮರು ಉದ್ಯೋಗಾಕಾಂಕ್ಷಿಗಳ ಬಳಿ ಲಕ್ಷ ಲಕ್ಷ ಹಣ ವಂಚಿಸಿರುವ ಘಟನೆ ನಡೆದಿದ್ದು, ಈ ಕುರಿತಂತೆ ವಂಚನೆಗೆ ಒಳಗಾದಂತ ಅಭ್ಯರ್ಥಿಗಳು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಟಿಸಿ ಹುದ್ದೆ ಕೊಡಿಸುವುದಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಇದನ್ನೇ ನಂಬಿದ್ದ ವಿಜಯಪುರದ ಹುಸನಪ್ಪ ಮಾಡ್ಯಾಳ್, ಶಿವಕುಮಾರ್, ಅಶೋಕ್ ಹಾಗೂ ಇತರರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬಳಿಕ ಬೆಂಗಳೂರು, ವಿಜಯಪುರ ಸೇರಿ ಹಲವು ಕಡೆ ಕರೆಸಿ ಖದೀಮರು ಒಬ್ಬೊಬರಿಂದ ಹಂತಹಂತವಾಗಿ 20 ರಿಂದ 25 ಲಕ್ಷ ರೂ. ಹಣ ಪಡೆದುಕೊಂಡಿದ್ದಾರೆ.
ಹಣ ಪಡೆದುಕೊಂಡು ಆನ್‌ಲೈನ್ ಮೂಲಕ ನಕಲಿ ಟ್ರೈನಿಂಗ್ ಆರ್ಡರ್ ಕಾಫಿ ಕೂಡ ಕೊಟ್ಟಿದ್ದರು. ನಂತರ ಮುಂಬೈ ಹಾಗೂ ಕಾನ್ಪುರದಲ್ಲಿ ಫೇಕ್ ಟ್ರೈನಿಂಗ್ ಕೂಡ ಕೊಡಿಸಿದ್ದರು. ಟ್ರೈನಿಂಗ್ ಮುಗಿದ ಕೆಲ ದಿನಗಳ ನಂತರ ಡ್ಯೂಟಿಗೆ ಜಾಯಿನ್ ಆಗಲು ಹೇಳಿದ್ದಾರೆ. ಕೆಲಸ ಸಿಕ್ಕೇ ಬಿಡ್ತು ಎಂಬ ಖುಷಿಯಲ್ಲಿದ್ದರಿಗೆ ತಿಂಗಳು ಉರುಳಿದ್ರು ನೇಮಕಾತಿ ಪತ್ರ ಬರಲಿಲ್ಲ. ಇದರಿಂದ ಅನುಮಾನಗೊಂಡ ಆಕಾಂಕ್ಷಿಗಳು ಪರಿಶೀಲಿಸಿದಾಗ ಮೋಸ ಹೋಗಿದ್ದು ಗೊತ್ತಾಗಿದೆ.
ಮೋಸ ಹೋದವರು ವಂಚಕರ ಬಳಿ ಕೇಳಿದಾಗ ಪ್ರಾಣ ಬೆದರಿಕೆ ಹಾಕಿದ್ದಾರೆ.ಘಟನೆ ಸಂಬಂಧ ವಿಜಯಪುರದ ಡಾ.ಲಕ್ಷ್ಮಿಕಾಂತ್ ಹೊಸಮನಿ, ಮುರುಳಿ, ಭೀಮರಾವ ಎಂಟಮನಿ, ಬಸು ಕಾಸಪ್ಪ, ಕೂಲಪ್ಪ ಸಿಂಗೆ, ಸಂತೋಷ್, ಶ್ರೀಧರ್ ಸೇರಿ ಒಟ್ಟು 7 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.