ದಾವಣಗೆರೆ : ದಾವಣಗೆರೆ ಶಾಸಕ ಬಿಪಿ ಹರೀಶ್ ಎಸ್ಪಿ ಉಮಾ ಪ್ರಶಾಂತ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪ ಹಿನ್ನಲೆಯಲ್ಲಿ ಇದೀಗ ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೌದು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಿಪಿ ಹರೀಶ್ಗೆ ಇದೀಗ ಸಂಕಷ್ಟ ಎದುರಾಗಿದೆ. ಸೆಪ್ಟೆಂಬರ್ 02ರಂದು ದಾವಣಗೆರೆ ನಗರದ ವರದಿಗಾರರ ಕೂಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಉಮಾ ಪ್ರಶಾಂತ್ರನ್ನು ಉದ್ದೇಶಿಸಿ ಮಾತನಾಡುವಾಗ ಶಾಮನೂರು ಮನೆ ಶ್ವಾನದ ತರ ಆಡುತ್ತಾರೆ’ ಎಂದು ಶಾಸಕ ಬಿಪಿ ಹರೀಶ್ ಕೀಳು ಮಟ್ಟದ ಭಾಷೆ ಬಳಸಿದ್ದರು.
ಈ ಸಂಬಂಧ ಎಸ್ಪಿ ಉಮಾ ಪ್ರಶಾಂತ್ ನೀಡಿದ ದೂರಿನ ಮೇರೆಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ BNS 2023 (U/s-132,351(2),79) ಪ್ರಕರಣ ದಾಖಲಾಗಿದೆ. ಸದ್ಯ ಶಾಸಕರ ಆಕ್ಷೇಪಾರ್ಹ ಹೇಳಿಕೆಗೆ ಎಫ್ಐಆರ್ ದಾಖಲಾಗಿದೆ. ಈ ಕಾರಣಕ್ಕೆ ನಿನ್ನೆ ರಾತ್ರಿ ದಾವಣಗೆರೆ ನಗರದ ಕೆಟಿಜೆ ಪೊಲೀಸ್ ಠಾಣೆಯ ಸಿಬ್ಬಂದಿ ದಾವಣಗೆರೆ ನಗರದ ವಿಶ್ವೇಶ್ವಯ್ಯ ಪಾರ್ಕ ಬಳಿ ಇರುವ ಶಾಸಕ ಬಿಪಿ ಹರೀಶ್ ಮನೆಗೆ ಭೇಟಿ ನೀಡಿದ್ದರು. ಶಾಸಕರು ಬೆಂಗಳೂರಿಗೆ ತೆರಳಿದ್ದರು. ಪೊಲೀಸ್ ಠಾಣೆಗ ಬಂದು ವಿಚಾರಣೆ ಹಾಜರಾಗಿ ಎಂದು ಮೌಖಿತವಾಗಿ ಪೊಲೀಸರು ಹರೀಶ್ ಪತ್ನಿ ಹಾಗೂ ಪುತ್ರನಿಗೆ ಹೇಳಿದ್ದಾರೆ.