ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊನೆಗೂ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿದೆ. 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ವೆನೆಜುವೆಲಾದ ವಿರೋಧ ಪಕ್ಷದ ಮಾರಿಯಾ ಕೊರಿನಾ ಮಚಾದೋ ಅವರು ತನಗೆ ಸಿಕ್ಕಿದ್ದ ಪ್ರಶಸ್ತಿಯನ್ನು ಟ್ರಂಪ್ ಅವರಿಗೆ ನೀಡಿದ್ದಾರೆ.
ಹೌದು ವೆನೆಜುವೆಲಾದ ಮಾರಿಯಾ ಕೊರಿನಾ ಮಚಾದೊ ಅವರು ತಮ್ಮ ನೊಬೆಲ್ ಶಾಂತಿ ಪುರಸ್ಕಾರವನ್ನು ಡೊನಾಲ್ಡ್ ಟ್ರಂಪ್‌ಗೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಟ್ರಂಪ್ ಈ ಪ್ರಶಸ್ತಿಯನ್ನು ಬಹುಕಾಲದಿಂದ ಬಯಸಿದ್ದರು. ನೊಬೆಲ್ ಸಮಿತಿಯ ನಿಯಮದಂತೆ ಪ್ರಶಸ್ತಿಯನ್ನು ವರ್ಗಾಯಿಸಲು ಸಾಧ್ಯವಿಲ್ಲವಾದರೂ, ಮಚಾದೊ ಅವರ ಈ ನಡೆ ವೆನೆಜುವೆಲಾಗೆ ಅಮೆರಿಕದ ಬೆಂಬಲ ಬಲಪಡಿಸಲು ರೂಪಿಸಿದ ರಾಜಕೀಯ ತಂತ್ರ ಎಂದು ವಿಶ್ಲೇಷಿಸಲಾಗಿದೆ.
ಮಚಾದೊ ಅವರು ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಭೇಟಿಯಾದರು. ವಾಷಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಚಾದೊ, ಅಧ್ಯಕ್ಷ ಟ್ರಂಪ್‌ಗೆ ಪುರಸ್ಕಾರ ಪ್ರಧಾನ ಮಾಡಿರುವುದಾಗಿ ಹೇಳಿದರು. ಟ್ರಂಪ್ ಅದನ್ನು ಸ್ವೀಕರಿಸಿದ್ದಾರೆಯೇ ಎಂದು ಅವರು ಹೇಳಲಿಲ್ಲ. ಈ ವಿಷಯದ ಕುರಿತು ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಲು ಮಚಾದೊ ನಿರಾಕರಿಸಿದರು. ವೆನೆಜುವೆಲಾದ ಸ್ವಾತಂತ್ರ್ಯಕ್ಕೆ ಅವರ ವಿಶೇಷ ಕೊಡುಗೆಗಾಗಿ ಪುರಸ್ಕಾರವನ್ನು ಅವರಿಗೆ ಅರ್ಪಿಸಿದ್ದೇನೆ ಎಂದಷ್ಟೇ ಹೇಳಿದ್ದಾರೆ.








