ಬೆಂಗಳೂರು : ಕುಡಿತದ ಚಟಕ್ಕೆ ದಾಸನಾಗಿದ್ದರಿಂದ ಬೈದು ಬುದ್ಧಿ ಹೇಳಿದ ತಂದೆಯ ಎದೆಗೆ ಮಗನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದ ಕೆರೆ ಮುನೇಶ್ವರ ದೇವಸ್ಥಾನದ ಬಳಿ ಸೋಮವಾರ ಸಂಜೆ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ನೈಸ್ ರಸ್ತೆಯಲ್ಲಿ ಸೆಕ್ಯೂರಿಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಚನ್ನಬಸವಯ್ಯ (61) ಎಂದು ತಿಳಿದುಬಂದಿದೆ.ಕೊಲೆ ಮಾಡಿದ ಪಾಪಿ ಮಗನನ್ನು ಅಮಿತ್ (21) ಎಂದು ತಿಳಿದುಬಂದಿದೆ.ಪ್ರತಿ ದಿನ ಇದೇ ವಿಚಾರಕ್ಕೆ ಅಪ್ಪ – ಮಗನ ನಡುವೆ ಗಲಾಟೆ ನಡೆಯುತ್ತಿತ್ತು. ಸೋಮವಾರ ಸಹ ಇದೇ ವಿಚಾರಕ್ಕೆ ಗಲಾಟೆ ನಡೆದಿದೆ.
ಮಗನಿಗೆ ಈ ಚಟದಿಂದ ಮುಕ್ತಿಹೊಂದಿ ಚೆನ್ನಾಗಿ ದುಡಿ ಎಂದು ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡ ಮಗ ಅಮಿತ್ ತಂದೆ ಚನ್ನಬಸವಯ್ಯ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆಯೇ ಚನ್ನಬಸವಯ್ಯ ಸಾವನ್ನಪ್ಪಿದ್ದಾರೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆ ಬ್ಯಾಡರಹಳ್ಳಿ ಪೊಲೀಸರು ಅಮಿತ್ ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.