ಮಂಗಳೂರು : ದರೋಡೆಕೋರರು ED ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ 30 ಲಕ್ಷ ನಗದು ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಘಟನೆ ನಡೆದಿದೆ.
ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿನ ನಿವಾಸಿ ಸುಲೈಮಾನ್ ಹಾಜಿ ಎಂಬವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ನಿನ್ನೆ ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡವೊಂದು ದಾಳಿ ನಡೆಸಿದಂತೆ ನಟಿಸಿದೆ.
ನಾವು ಇಡಿ ಅಧಿಕಾರಿಗಳು ಎಂದು ಸುಲೈಮಾನ್ ಹಾಜಿ ಅವರನ್ನು ನಂಬಿಸಿ ಸುಮಾರು ಎರಡು ಗಂಟೆಗಳವರೆಗೆ ಮನೆಯಲ್ಲ ಪರಿಶೀಲಿಸಿದ್ದಾರೆ. ಕೊನೆಗೆ ಮನೆಯಲ್ಲಿದ್ದ ಸುಮಾರು 30 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ. ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಟ್ಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.