ವಿಜಯಪುರ : ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಆದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಂಬರುವ ವಿಜಯದಶಮಿಗೆ ರಾಜ್ಯದಲ್ಲಿ ಹೊಸ ಪಕ್ಷ ರಚನೆ ಮಾಡುವ ಕುರಿತು ಸುಳಿವು ನೀಡಿದ್ದು, ರಾಜ್ಯದಲ್ಲಿ ಹಿಂದೂ ಪಕ್ಷವನ್ನು ಕಟ್ಟುವ ಅನಿವಾರ್ಯತೆ ಇದೆ. ಹಾಗಾಗಿ ಮುಂದಿನ ವಿಜಯದಶಮಿಗೆ ಹೊಸ ಪಕ್ಷ ರಚನೆ ಮಾಡುವ ಅನಿವಾರ್ಯತೆ ಬರಲಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂ ಪಕ್ಷವನ್ನು ಕಟ್ಟುವ ಅನಿವಾರ್ಯತೆ ಇದೆ. ಇದರಿಂದ ರಾಜ್ಯಾದ್ಯಂತ ನಮ್ಮ ಹೋರಾಟ ಆರಂಭವಾಗಿದೆ. ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುತ್ತೇನೆ. ಬಿಎಸ್ ಯಡಿಯೂರಪ್ಪ ವಿಜಯೇಂದ್ರ ಕುಟುಂಬ ರಾಜಕಾರಣ ತಡೆಯಬೇಕು ಎಂದು ಅವರು ಮತ್ತೆ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.
ಅಕಸ್ಮಾತ್ ಯಡಿಯೂರಪ್ಪ ವಿಜಯೇಂದ್ರನೆ ಪಕ್ಷಕ್ಕೆ ಅನಿವಾರ್ಯವಾದರೆ, ವಿಜಯೇಂದ್ರನನ್ನು ಅಧ್ಯಕ್ಷರಾಗಿ ಮುಂದುವರಿಸಿದರೆ ಅದು ಪಕ್ಷದ ಕರ್ಮ. ನಾವು ಹಿಂದೂ ಪರವಾಗಿ ಪಕ್ಷ ಕಟ್ಟಬೇಕಾದ ಅನಿವಾರ್ಯತೆ ಬರಲಿದೆ. ಮುಂದಿನ ವಿಜಯದಶಮಿಗೆ ರಾಜ್ಯದಲ್ಲಿ ಹೊಸ ಪಕ್ಷ ರಚನೆ ಮಾಡಲಾಗುತ್ತೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದರು.