ಬೆಂಗಳೂರು : ಬೆಂಗಳೂರಿನ EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಡೆದ ಕೋಟ್ಯಾಂತರ ರೂ. ವಂಚನೆಯಲ್ಲಿ ಅಕೌಂಟೆಂಟ್ ಜಗದೀಶ್ ಮಾಸ್ಟರ್‌ಮೈಂಡ್ ಎಂಬುದು ಬಯಲಾಗಿದೆ. ಸದ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಸರ್ಕಾರ ನಿರ್ಧರಿಸಿದೆ.
ಹೌದು EPFO ಸ್ಟಾಫ್ ಕೋ-ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣದ ಗಂಭೀರತೆಯನ್ನು ಮನಗಂಡ ಸರ್ಕಾರ, ತನಿಖೆಯನ್ನು ಸಿಐಡಿಗೆ ವರ್ಗಾಯಿಸಲು ನಿರ್ಧರಿಸಿದೆ. ಪ್ರಾಥಮಿಕ ತನಿಖೆಯನ್ನು ಮುಗಿಸಿದ ನಂತರ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಈ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಿದ್ದಾರೆ. ಪ್ರಸ್ತುತ ತನಿಖೆ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಅವರ ಮೇಲ್ವಿಚಾರಣೆಯಲ್ಲಿ ಮುಂದುವರಿದಿದೆ.
ಇಪಿಎಫ್ಒ ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಿಇಒ ಗೋಪಿನಾಥ್ ಈ ಕೇಸ್‌ನ ಮಾಸ್ಟರ್‌ಮೈಂಡ್ ಎಂದು ಈ ಹಿಂದೆ ಭಾವಿಸಿದ್ದ ಪೊಲೀಸರು ಅಕೌಂಟೆಂಟ್ ಜಗದೀಶ್‌ನ ಆಸ್ತಿ, ಖಾತೆಗಳು ಹಾಗೂ ವಂಚನೆ ವಿಧಾನ ನೋಡಿ ಆಘಾತಕ್ಕೊಳಗಾಗುವಂತಾಗಿದೆ. ಕೇವಲ 21,000 ರೂ. ಸಂಬಳ ಪಡೆಯುತ್ತಿದ್ದ ಜಗದೀಶ್ ಕೋಟ್ಯಂತರ ಮೌಲ್ಯದ ಮನೆ, ಕಾರು, ಫಾರ್ಮ್‌ಹೌಸ್ ಸೇರಿದಂತೆ ಹಲವು ಆಸ್ತಿಗಳನ್ನು ಹೊಂದಿರುವುದು ಪತ್ತೆಯಾಗಿದೆ.








