ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಭಾರತೀಯ ಸೇನೆಯ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ.
ವರದಿಗಳ ಪ್ರಕಾರ ಮಚ್ಚಿಲ್ ಸೆಕ್ಟರ್ನಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ನಿಯಂತ್ರಣ ರೇಖೆಯ (ಎಲ್ಒಸಿ) ಬಳಿ ಅನುಮಾನಾಸ್ಪದ ಚಲನವಲನಗಳನ್ನು ಸೇನೆ ಗಮನಿಸಿದ್ದು, ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ.
ಮೂಲಗಳ ಪ್ರಕಾರ, ಭಯೋತ್ಪಾದಕರು ಎಲ್ಒಸಿ ದಾಟಿ ಭಾರತದ ಪ್ರದೇಶಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದರು. ಸೇನೆಯು ತಕ್ಷಣವೇ ಪ್ರತಿದಾಳಿ ನಡೆಸಿ ಅವರನ್ನು ತಡೆದಿದೆ. ತೀವ್ರ ಗುಂಡಿನ ಚಕಮಕಿ ನಡೆದು ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಇತರ ಯಾವುದೇ ಭಯೋತ್ಪಾದಕರ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸೇನಾ ಸಿಬ್ಬಂದಿ ಇನ್ನೂ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ.
ಈ ಒಳನುಸುಳುವಿಕೆ ಪ್ರಯತ್ನವು ಪಾಕಿಸ್ತಾನದ ನಿರಂತರ ಕದನ ವಿರಾಮ ಉಲ್ಲಂಘನೆ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಪ್ರಚೋದಿಸುವ ಪ್ರಯತ್ನಗಳ ಭಾಗವಾಗಿರಬಹುದು ಎಂದು ಸೇನಾ ಅಧಿಕಾರಿಗಳು ಹೇಳುತ್ತಾರೆ.