ಚಾಮರಾಜನಗರ : ಹುಲಿ ಸೆರೆ ಕೂಂಬಿಂಗ್ ಸಲುವಾಗಿ ಬಂದಿದ್ದ ಸಾಕಾನೆ ಪಾರ್ಥ ಸಾರಥಿಗೆ ಜೇನು ಕಚ್ಚಿದ ಪರಿಣಾಮ ದಿಕ್ಕಾಪಾಲಾಗಿ ಓಡಿ ಗುಂಡ್ಲುಪೇಟೆ ಪಟ್ಟಣದೊಳಗೆ ನುಗ್ಗಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಕಲ್ಲಹಳ್ಳಿ ಗ್ರಾಮದ ಬಳಿ ಹುಲಿ ಸೆರೆ ಕೂಂಬಿಂಗ್ ಸಲುವಾಗಿ ರಾಂಪುರ ಸಾಕಾನೆ ಶಿಬಿರದ ಪಾರ್ಥಸಾರಥಿಯನ್ನು ಕರೆತರಕಾಗಿತ್ತು. ಕಾರ್ಯಾಚರಣೆ ಬಳಿಕ ನೀರು ಕುಡಿಸಲು ತೆರಳಿದಾಗ ಹೆಜ್ಜೇನು ದಾಳಿ ನಡೆಸಿವೆ. ನಂತರ ಮಾವುತ ಚೇತನ್ ಮಾತು ಕೇಳದೇ ಆನೆ ಪಟ್ಟಣಕ್ಕೆ ಬಂದಿದೆ. ದಾರಿ ತಪ್ಪಿ ಬಂದ ಸಾಕಾನೆ ಪಟ್ಟಣದ ಸಾರಿಗೆ ಬಸ್ ನಿಲ್ದಾಣದೊಳಗೆ ನುಗ್ಗಿದೆ. ಈ ವೇಳೆ ಬೈಕ್ ಸವಾರರು, ಪ್ರಯಾಣಿಕರು ಇತರೆ ಸಾರ್ವಜನಿಕರು ದಿಕ್ಕಾಪಾಲಾಗಿ ಓಡಿದ್ದಾರೆ.
ನಂತರ ನಿಲ್ದಾಣದಿಂದ ಹೊರಬಂದ ಆನೆ ಮಡಹಳ್ಳಿ ರಸ್ತೆ ಮೂಲಕ ಅಶ್ವಿನಿ ಬಡಾವಣೆ, ಜೆಎಸ್‍ಎಸ್ ನಗರದ ಕಡೆಯಲ್ಲೆಲ್ಲಾ ಓಡಾಡಿದೆ. ಸಾರ್ವಜನಿಕರಿಗೆ ತೊಂದರೆ ಉಂಟಾಗುವುದನ್ನು ತಡೆಯಲು ಅರಣ್ಯ ಇಲಾಖೆಯವರು ಸಾಕಾನೆಯನ್ನು ಹಿಂಬಾಲಿಸುವ ಜೊತೆಗೆ ಮಡಹಳ್ಳಿ ರಸ್ತೆಯಲ್ಲಿ ಬೈಕ್ ಸಂಚಾರಕ್ಕೆ ಪೊಲೀಸರ ಸಹಕಾರದಲ್ಲಿ ನಿರ್ಬಂಧ ಹಾಕಿಸಿದ್ದರು.








