ಬೆಂಗಳೂರು : ಒಂದು ಕಡೆ ಪ್ರಸ್ತುತ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ಅವರು ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ ಎಂದು ಹೇಳಿಕೆ ನೀಡಿದರೆ, ಮತ್ತೊಂದು ಕಡೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಣ ನವದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ಅವರನ್ನು ಭೇಟಿಯಾಗಿ ಇವರ ವಿರುದ್ಧ ದೂರು ನೀಡಿದ್ದಾರೆ. ಇದೆಲ್ಲದರ ನಡುವೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಶೀಘ್ರ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಕುರಿತು ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಶೀಘ್ರವೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಶುರುವಾಗಲಿದೆ. ಚುನಾವಣಾ ನಡೆಯಿಸಿ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. ಬೂತ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯಲಿದೆ.
ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಯಾವುದೇ ರೀತಿಯಾದ ಗೊಂದಲ ಇಲ್ಲ. ಎಲ್ಲರೂ ಸೇರಿ ಚರ್ಚಿಸಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ ನೀಡಿದರು. ಇದರಿಂದ ಸಹಜವಾಗಿ ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.