ಮೈಸೂರು : ಮೈಸೂರು ಜಿಲ್ಲೆಯ ಹುಣಸೂರು ಚಿನ್ನಾಭರಣ ಶೋ ರೂಂನಲ್ಲಿ ಹಾಡಹಗಲೇ ದರೋಡೆಕೋರರು ಸಿಬ್ಬಂದಿಗೆ ಗನ್ ತೋರಿಸಿ 5-6 ಕೆ.ಜಿ. ಚಿನ್ನಾಭರಣ ಮತ್ತು ವಜ್ರಾಭರಣಗಳನ್ನು ದರೋಡೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರಿನ ಬೈಪಾಸ್ ರಸ್ತೆಯಲ್ಲಿನ ಸೈ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಂನಲ್ಲಿ ನಿನ್ನೆ ಈ ಘಟನೆ ನಡೆದಿದೆ.
ಭಾನುವಾರ ಮಧ್ಯಾಹ್ನ 12.30ಕ್ಕೆ 2 ಬೈಕ್ನಲ್ಲಿ ಆಗಮಿಸಿದ 5 ದರೋಡೆ ಕೋರರು ಕೃತ್ಯ ಎಸಗಿದ್ದಾರೆ. ಎಲ್ಲರ ಕೈಯಲ್ಲೂ ಗನ್ ಇತ್ತು. ಒಬ್ಬ ಹೆಲೈಟ್ ಧರಿಸಿದ್ದರೆ, ಮಿಕ್ಕವರು ಮಳಿಗೆಯೊಳಗೆ ಬಂದ ನಂತರ ಮಾಸ್ಕ್ ಧರಿಸಿದ್ದರು. ಮಳಿಗೆಯ ವ್ಯವಸ್ಥಾಪಕ ಅಜ್ಜರ್ ಊಟಕ್ಕೆ ತೆರಳಿದ್ದ ವೇಳೆ ಆಗಮಿಸಿದ ದರೋಡೆ ಕೋರರು, ಮಳಿಗೆ ಯಲ್ಲಿ ಚಿನ್ನ ಖರೀದಿಸುತ್ತಿದ್ದ ಗ್ರಾಹಕರನ್ನು ಸುಮ್ಮನೆ ಕೂರಲು ತಿಳಿಸಿದರು.
ನಂತರ, ಎಲ್ಲಾ 18 ಸಿಬ್ಬಂದಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ. ದರೋಡೆಕೋರರ ಪೈಕಿ ಇಬ್ಬರು ಚಿನ್ನಾಭರಣಗಳನ್ನು ಬ್ಯಾಗಿನಲ್ಲಿ ತುಂಬಿಸಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ ನಾಡುತ್ತಿದ್ದರು. ಕ್ಷಣಮಾತ್ರದಲ್ಲಿ ಚಿನ್ನಾಭರ ಣಗಳನ್ನು ತುಂಬಿಕೊಂಡ ದರೋಡೆಕೋರರು ಮಳಿಗೆಯಿಂದ ತೆರಳಿದ್ದಾರೆ. ತೆರಳುವಾಗ ಒಬ್ಬ ಗಾಳಿಯಲ್ಲಿ ಒಂದು ಗುಂಡು ಹಾರಿಸಿದ್ದಾನೆ. 2 ಬೈಕುಗಳು ಮೈಸೂರು ರಸ್ತೆ ಕಡೆ ತೆರಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ದರೋಡೆಕೋರರು ನಮ್ಮತ್ತ ಗನ್ ತೋರಿಸಿದ ಹೆದರಿಸಿದರು. ಕೈಗಳನ್ನು ಮೇಲೆತ್ತಿ ಅಸಹಾಯಕರಾಗಿ ಅವರು ಹೇಳಿದಂತೆ ಕೇಳಿದೆವು. ಮೂವರು ಚಿನ್ನಾಭರಣ, ವಜ್ರದ ಉಂಗುರಗಳನ್ನು ಬ್ಯಾಗ್ಗಳಿಗೆ ತುಂಬಿದರು. ಕೆಲ ದರೋಡೆಕೋರರು ಒಳಗೆ ಬಂದ ಮೇಲೆ ಮುಖಗವಸು ಹಾಕಿಕೊಂಡರು. ಒಬ್ಬ ಹೆಲ್ಮೆಟ್ ಅಲ್ಲೇ ಬಿಟ್ಟು ಹೋದ. ಅವರು ಹೋಗುವಾಗ ಹೊರಗೆ ಗನ್ ಫೈರ್ ಮಾಡಿದ ಸದ್ದು ಕೇಳಿಸಿತು. ಎಲ್ಲವೂ ಸಿನಿಮೀಯವಾಗಿ ಏಳೆಂಟು ನಿಮಿಷಗಳಲ್ಲಿನಡೆದು ಹೋಯಿತು ಎಂದು ಸ್ಕೈ ಗೋಲ್ಡ್ ಆಯಂಡ್ ಡೈಮಂಡ್ ಮಳಿಗೆ ಸಿಬ್ಬಂದಿ ನಡೆದ ಘಟನೆಯನ್ನು ಗಾಬರಿಯಿಂದ ವಿವರಿಸಿದರು.
ಐಜಿಪಿ ಭೇಟಿ:
ಐಜಿಪಿ ಡಾ.ಬೋರಲಿಂಗಯ್ಯ, ಜಿಲ್ಲಾಪೊಲೀಸ್ ವರಿಷ್ಠಾಕಾರಿ ವಿಷ್ಣುವರ್ಧನ್, ಎಎಸ್ಪಿ ನಾಗೇಶ್, ಡಿವೈಎಸ್ಪಿ ರವಿ, ದರೋಡೆಯಾದ ಮಳಿಗೆಯನ್ನು ಪರಿಶೀಲಿಸಿ, ಸಿಬ್ಬಂದಿಯಿಂದ ಮಾಹಿತಿ ಪಡೆದರು. ಬೆರಳಚ್ಚು ತಜ್ಞರು, ಶ್ವಾನದಳ ಕರೆಸಲಾಗಿತ್ತು. ದರೋಡೆ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿಸೆರೆಯಾಗಿದೆ. ನಿಖರವಾಗಿ ಎಷ್ಟು ಚಿನ್ನಾಭರಣ ದರೋಡೆಯಾಗಿದೆ ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ. ದರೋಡೆಕೋರರ ಪತ್ತೆಗೆ ಐದು ತಂಡಗಳನ್ನು ರಚಿಸಲಾಗುತ್ತಿದೆ ಎಂದು ಐಜಿಪಿ ಡಾ.ಬೋರಲಿಂಗಯ್ಯ ಮಾಹಿತಿ ನೀಡಿದ್ದಾರೆ.








