ರಾಯಚೂರು : ಕಳೆದ ವರ್ಷ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆ ನಡೆದಿದ್ದು ಇಡಿ ರಾಜ್ಯಾದ್ಯಂತ ಭಾರಿ ಸುದ್ದಿಯಾಗಿತ್ತು. ಈ ಬಾರಿ ನಾಗಮಂಗಲದಲ್ಲಿ ಹಿಂದೂ ಮಹಾ ಗಣಪತಿ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಆದರೆ ರಾಯಚೂರಲ್ಲಿ ನಿನ್ನೆ ಕಿಡಿಗೇಡಿಗಳು ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.
ಹೌದು ರಾಯಚೂರಿನಲ್ಲಿ ಗಣೇಶ ಮೂರ್ತಿಯ ಅದ್ಧೂರಿ ಮೆರವಣಿಗೆ ವೇಳೆ ಇಬ್ಬರು ದುಷ್ಕರ್ಮಿಗಳು ದುಷ್ಟತನ ಮೆರೆದಿದ್ದಾರೆ. ಗಂಗಾ ನಿವಾಸ ರಸ್ತೆಯಲ್ಲಿ ಪಾರ್ವತಿ ಸುತನ ಮೆರವಣಿಗೆ ವೇಳೆ, ಇಬ್ಬರು ಮನೆ ಮೇಲೆ ನಿಂತು ರಾಜಾರೋಷವಾಗಿ ಕಲ್ಲು ತೂರಿದ್ದಾರೆ. ಈ ವೇಳೆ ವಿನಯ್, ಗಣೇಶ್ ಎಂಬುವರು ಗಾಯಗೊಂಡಿದ್ದಾರೆ.
ಘಟನೆ ಬೆನ್ನಲ್ಲೇ ಕೆರಳಿದ ಸಾರ್ವಜನಿಕರು ಪುಂಡರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಳೆ ವೈಷಮ್ಯ ಮನಸ್ಸಿನಲ್ಲಿ ಇಟ್ಕೊಂಡು, ತಮ್ಮ ಏರಿಯಾದಲ್ಲಿ ಮೂರ್ತಿಯ ಶೋಭಯಾತ್ರೆ ಮಾಡಬಾರದು ಅಂತಾ ಈ ಕೃತ್ಯ ಎಸಗಿದ್ದಾಗಿ ಆರೋಪಿಗಳಾದ ಪ್ರಶಾಂತ್ ಹಾಗೂ ಪ್ರವೀಣ್, ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.