ಬೆಂಗಳೂರು : ಬೆಂಗಳೂರಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಆಫ್ರಿಕಾ ಪ್ರಜೆಯ ಬಳಿಯಿದ್ದ ಸುಮಾರು ನಾಲ್ಕು ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದು ಆಫ್ರಿಕಾ ಪ್ರಜೆಯನ್ನು ಇದೀಗ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಬೆಂಗಳೂರು ಹೊರವಲಯದ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ಮನೆ ಮಾಡಿಕೊಂಡು ಡ್ರಗ್ ಡೀಲ್ ಮಾಡುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್ ಡೇನಿಯಲ್ ಎಂಬುವವನ್ನು ಬಂಧಿಸಿ ಬರೋಬ್ಬರಿ ನಾಲ್ಕು ಕೋಟಿ ರೂ. ಮೌಲ್ಯದ 2.5 ಕೆಜಿ ಎಂಡಿಎಂಎ ಕ್ರಿಸ್ಟೆಲ್ ಸೀಜ್ ಮಾಡಿದ್ದಾರೆ. ಆರೋಪಿಯು 2023 ರ ಡಿಸೆಂಬರ್ನಲ್ಲಿ ವ್ಯಾಪಾರ ವೀಸಾದ ಮೇಲೆ ಬೆಂಗಳೂರಿಗೆ ಆಗಮಿಸಿ, ಸೋಲದೇವನಹಳ್ಳಿಯಲ್ಲಿ ತನ್ನ ಸ್ನೇಹಿತನೊಂದಿಗೆ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನಿಂದ ಪೊಲೀಸರು 1.48 ಕೆಜಿ ಬಿಳಿ ಬಣ್ಣದ ಎಂಡಿಎಂಎ ಡ್ರಗ್ಸ್ ಮತ್ತು 1.1 ಕೆಜಿ ಕಂದು ಬಣ್ಣದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 4 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಹೆಚ್ಚಾಗುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ ವೃತ್ತಿಪರರನ್ನೇ ಡ್ರಗ್ಸ್ ಮಾಫಿಯಾ ಗುರಿಯಾಗಿಸುತ್ತಿದೆ. ಇಂಥ ಕೃತ್ಯಗಳ ವಿರುದ್ಧ ಸಿಸಿವಿ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ.