ಜೆರುಸಲೇಂ/ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಗರಿಷ್ಠ ಮಟ್ಟಕ್ಕೆ ತಲುಪಿರುವ ಬೆನ್ನಲ್ಲೇ, ಇಸ್ರೇಲ್ ಮಿಲಿಟರಿ (IDF) ಇರಾನ್ನ ನಾಗರಿಕರಿಗೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಇರಾನ್ನಾದ್ಯಂತ ಮುಂದಿನ 12 ಗಂಟೆಗಳ ಕಾಲ ಯಾರೂ ರೈಲುಗಳಲ್ಲಿ ಪ್ರಯಾಣಿಸಬಾರದು ಮತ್ತು ರೈಲ್ವೆ ನಿಲ್ದಾಣಗಳ ಹತ್ತಿರ ಸುಳಿಯಬಾರದು ಎಂದು ಸೂಚಿಸಿದೆ.
ಇಸ್ರೇಲ್ ರಕ್ಷಣಾ ಪಡೆ (IDF) ತನ್ನ ಅಧಿಕೃತ ‘X’ ಖಾತೆಯಲ್ಲಿ “ಇರಾನ್ನ ರೈಲು ಪ್ರಯಾಣಿಕರಿಗೆ ತುರ್ತು ಎಚ್ಚರಿಕೆ” ಎಂಬ ಸಂದೇಶವನ್ನು ಪೋಸ್ಟ್ ಮಾಡಿದೆ. ಟೆಹ್ರಾನ್ ಕಾಲಮಾನ ರಾತ್ರಿ 9 ಗಂಟೆಯಿಂದ ಅನ್ವಯವಾಗುವಂತೆ ಈ ಸೂಚನೆ ನೀಡಲಾಗಿದೆ.
“ನಿಮ್ಮ ರೈಲು ಪ್ರಯಾಣ ಅಥವಾ ರೈಲ್ವೆ ಹಳಿಗಳ ಬಳಿ ಇರುವಿಕೆಯು ನಿಮ್ಮ ಜೀವಕ್ಕೆ ಅಪಾಯವನ್ನು ತಂದೊಡ್ಡಬಹುದು. ಹೀಗಾಗಿ ತಕ್ಷಣವೇ ರೈಲು ಸಂಚಾರವನ್ನು ನಿಲ್ಲಿಸಿ” ಎಂದು ಇಸ್ರೇಲ್ ಎಚ್ಚರಿಸಿದೆ.
ಸಾಮಾನ್ಯವಾಗಿ ಒಂದು ದೇಶದ ಮಿಲಿಟರಿ ಮತ್ತೊಂದು ದೇಶದ ನಾಗರಿಕರಿಗೆ ಇಂತಹ ನೇರ ಎಚ್ಚರಿಕೆ ನೀಡುವುದು ಅಪರೂಪ. ಇರಾನ್ನ ರೈಲ್ವೆ ಮೂಲಸೌಕರ್ಯಗಳ ಮೇಲೆ ಇಸ್ರೇಲ್ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಈ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇಸ್ರೇಲ್ನ ಈ ಎಚ್ಚರಿಕೆಗೆ ಇರಾನ್ ಸರ್ಕಾರದಿಂದ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಡುವಿನ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಶೀತಲ ಸಮರವು ಈಗ ನೇರ ಸಂಘರ್ಷದ ಹಂತಕ್ಕೆ ತಲುಪುವ ಲಕ್ಷಣಗಳು ಕಾಣಿಸುತ್ತಿವೆ.








