ಕೊಪ್ಪಳ : ಕೊಪ್ಪಳದಲ್ಲಿ ಘೋರವಾದ ದುರಂತ ಸಂಭವಿಸಿದ್ದು, ರಜೆಯ ಹಿನ್ನೆಲೆಯಲ್ಲಿ ಹೈದರಾಬಾದ್ ಮೂಲದ ವೈದ್ಯೆ ತನ್ನ ಸ್ನೇಹಿತರೊಂದಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿಗೆ ಆಗಮಿಸಿದ್ದಳು. ಈ ವೇಳೆ ತುಂಗಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ.ನೀರಿನಲ್ಲಿ ನಾಪತ್ತೆಯಾಗಿರುವ ವೈದ್ಯೆಯನ್ನು ಹೈದರಾಬಾದ್‌ನ ನಾಂಪಲ್ಲಿ ಪ್ರದೇಶದ ನಿವಾಸಿ ಅನನ್ಯ ಮೋಹನ್ ರಾವ್ ಎಂದು ಗುರುತಿಸಲಾಗಿದೆ.
ಅನನ್ಯ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು. ರಜೆ ಕಳೆಯಲು ತಮ್ಮ ಸ್ನೇಹಿತರೊಂದಿಗೆ ಸಣಾಪುರ ಸಮೀಪ ಇರುವ ಖಾಸಗಿ ಗೆಸ್ಟ್ ಹೌಸ್ಗೆ ಮಂಗಳವಾರ ಸಂಜೆ ಬಂದಿದ್ದರು ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ 8.30 ಗಂಟೆಗೆ ಈ ಗೆಸ್ಟ್ ಹೌಸ್ ಹಿಂಭಾಗದಲ್ಲಿರುವ ತುಂಗಭದ್ರಾ ನದಿಗೆ ಮೂವರು ಈಜಾಡಲು ಹೋಗಿದ್ದು, ಇದರಲ್ಲಿ ಡಾ. ಅನನ್ಯ ರಾವ್, ಎತ್ತರದ ಕಲ್ಲಿನ ಮೇಲಿಂದ ನೀರಿಗೆ ಜಿಗಿದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು ನಾಪತ್ತೆಯಾಗಿದ್ದಾರೆ. ಈ ಜಾಗ ಕಲ್ಲು-ಗುಂಡುಗಳಿಂದ ಕೂಡಿದ್ದು, ನೀರು ಕಲ್ಲುಗಳ ಮಧ್ಯೆ ಒಂದು ಕಿ.ಮೀ. ಗೂ ಅಧಿಕ ದೂರ ಹರಿಯುತ್ತದೆ. ನೀರಿನ ಸೆಳೆತಕ್ಕೆ ಸಿಕ್ಕಿರುವ ಡಾ.ಅನನ್ಯ ಎಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆಂದು ತಿಳಿದಿಲ್ಲ.
ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ನಾಪತ್ತೆಯಾಗಿರುವ ಅನನ್ಯ ಅವರ ಶೋಧಕ್ಕೆ ಮುಂದಾಗಿದ್ದಾರೆ. ಕಲ್ಲು ಬಂಡೆಯ ಮೇಲಿಂದ ವೈದ್ಯೆ ಜಿಗಿಯುವ ಕೊನೆಯ ಕ್ಷಣದ ದೃಶ್ಯಾವಳಿ ಅವರ ಸ್ನೇಹಿತರ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಬಗ್ಗೆ ಗ್ರಾಮೀಣ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ.