ಬೆಂಗಳೂರು : ನವೆಂಬರ್ 13ರಂದು ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ನಡೆಯಲಿದೆ. ಅದರಲ್ಲೂ ಚನ್ನಪಟ್ಟಣ ಕ್ಷೇತ್ರ ತೀವ್ರ ಕುತೂಹಲ ಮೂಡಿಸಿದ್ದು, ಈಗಾಗಲೇ ಸಂಡೂರು ಹಾಗೂ ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ ಚನ್ನಪಟ್ಟಣದಲ್ಲಿ ಮಾತ್ರ ಇನ್ನೂ ಯಾವ ಪಕ್ಷದಿಂದಲೂ ಅಭ್ಯರ್ಥಿ ಘೋಷಣೆಯಾಗಿಲ್ಲ.
ಇದರ ಮಧ್ಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಮಾಜಿ ಸಂಸದ ಡಿಕೆ ಸುರೇಶ್ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿ ಎಂದು ಒತ್ತಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿ, ನಿಜ ನಮ್ಮ ಕಾರ್ಯಕರ್ತರು ಹೇಳ್ತಾ ಇದ್ದಾರೆ. ಪಾರ್ಟಿ ಹೈ ಕಮಾಂಡ್ ಏನು ಹೇಳ್ತಾರೆ ಅದೇ ಫೈನಲ್. ಲೋಕಸಭೆ ಫಲಿತಾಂಶದ ಶಾಕ್ನಿಂದ ಇನ್ನೂ ಹೊರಬಂದಿಲ್ಲ. ಸುರೇಶ್ ಅವರ ಸೋಲು ನಮಗೆ ಆಘಾತ ತಂದಿದೆ ಎಂದರು.
ಇನ್ನು ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಮಾತನಾಡಿ, ಬಹುತೇಕ ಎಲ್ಲಾ ಅಂತಿಮ ಮಾಡಿದ್ದೇವೆ. ಸಚಿವರಿಗೆ ಜವಾಬ್ದಾರಿ ನೀಡಿದ್ದೇವೆ, ಅವರು ನೋಡಿಕೊಳ್ತಾರೆ. ನಮ್ಮ ಪ್ರಸ್ತಾವನೆಯನ್ನು ದೆಹಲಿಗೆ ಕಳುಹಿಸುತ್ತೇವೆ. ದೆಹಲಿ ನಾಯಕರು ಅಂತಿಮ ತೀರ್ಮಾನ ಮಾಡ್ತಾರೆ ಎಂದರು.