ಬೆಂಗಳೂರು : ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಹಿಂದಿ ಪಾಸ್ ಕಡ್ಡಾಯ ಮಾಡದಂತೆ ಕನ್ನಡಪರ ಸಂಘಟನೆಗಳಿಂದ ಒತ್ತಾಯ ಕೇಳಿಬಂದ ಬೆನ್ನಲ್ಲೇ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಅವಶ್ಯಕತೆ ಇಲ್ಲ ಅಂತ ಕನ್ನಡಪರ ಸಂಘಟನೆಗಳು ಹೇಳ್ತಿವೆ. ಸಿಎಂ ಕೂಡ ದ್ವಿಭಾಷಾ ಸೂತ್ರ ತಂದರೆ ಒಳ್ಳೆಯದು ಅಂತ ಹೇಳಿದ್ದಾರೆ. ದ್ವಿಭಾಷಾ ಸೂತ್ರ ಬಂದರೆ ಒಳ್ಳೆಯದು. ಈಗ ತ್ರಿಭಾಷಾ ಸೂತ್ರ ಇದೆ. ಇದು ಬದಲಾವಣೆ ಆಗಬೇಕಾದ್ರೆ ಚರ್ಚೆ ಆಗಬೇಕು. ಶಿಕ್ಷಕರ ಜೊತೆಯೂ ಮಾತಾಡ್ತೀವಿ, ಸಿಎಂ ಜೊತೆ ನಾವು ಮಾತಾಡಬೇಕು. ಎಲ್ಲಾ ಆಯಾಮಗಳಲ್ಲಿ ಚರ್ಚಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಹಾಗಾಗಿ ಯಾರೂ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕೋದು ಬೇಡ. ಸಿಎಂ ಜೊತೆ ಮಾತಾಡಿ ಇಂದೇ ಈ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ಹೇಳಿದ್ದಾರೆ.
ಈ ಹಿಂದೆಯೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನ ಮಾತ್ರ ಒಳಗೊಂಡ ‘ದ್ವಿಭಾಷಾ ನೀತಿ’ಯನ್ನು ಜಾರಿಗೆ ತರಲು ಪ್ರೊ. ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ (SEP) ಆಯೋಗ ಶಿಫಾರಸು ಮಾಡಿತ್ತು. ಈ ನೀತಿಯು ಮಾತೃಭಾಷೆ/ಕನ್ನಡಕ್ಕೆ ಆದ್ಯತೆ ನೀಡುತ್ತಿದ್ದು, ಹಿಂದಿ ಭಾಷೆಯ ಕಡ್ಡಾಯ ಕಲಿಕೆಯನ್ನು ಕೈಬಿಡುವ ಗುರಿ ಹೊಂದಿತ್ತು.
SSLC ಪರೀಕ್ಷೆ, 625 ಅಂಕದ ಬದಲು 525ಕ್ಕೆ ಇಳಿಕೆ
ಇನ್ನು ಎಸ್ಎಸ್ಎಲ್ಸಿ ಪರೀಕ್ಷೆ 625ರ ಬದಲಿಗೆ 525 ಅಂಕಗಳಿಗೆ ನಡೆಸಲು ಕರ್ನಾಟಕ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಈ ವರ್ಷದಿಂದ ರಾಜ್ಯದ ಪಠ್ಯಕ್ರಮದಲ್ಲಿ ತೃತೀಯ ಭಾಷೆ ಕಡ್ಡಾಯವಲ್ಲ. ವಿದ್ಯಾರ್ಥಿಗಳು ತೃತೀಯ ಭಾಷೆ ಪರೀಕ್ಷೆ ಬರೆಯುತ್ತಾರೆ. ಆದರೆ ಆ ಭಾಷೆಯ 100 ಅಂಕ ಪರಿಗಣೆ ಮಾಡುವುದಿಲ್ಲ ಎಂದು ತಿಳಿಸಿದರು.
ತೃತೀಯ ಭಾಷೆಗೆ ಗ್ರೇಡ್ ನೀಡುತ್ತೇವೆ ಮತ್ತು ಇದರಲ್ಲಿ ಪಾಸ್, ಫೇಲ್ ಇರುವುದಿಲ್ಲ. ಹಿಂದಿ ಭಾಷೆ ಕಡ್ಡಾಯವಲ್ಲ. ಈ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯನವರು ಒಪ್ಪಿದ್ದಾರೆ ಎಂದು ಹೇಳಿದರು. ತೃತೀಯ ಭಾಷೆಗೆ ಎಬಿಸಿಡಿ ಎಂದು ಗ್ರೇಡ್ ನೀಡುತ್ತೇವೆ. ಈ ವರ್ಷದ ಪರೀಕ್ಷೆಯಲ್ಲಿ ಈ ನಿಯಮವನ್ನು ಜಾರಿ ಮಾಡಲಾಗುವುದು. ಇಂದು ಸಂಜೆ ಒಳಗಡೆ ಆದೇಶ ಜಾರಿಯಾಗಲಿದೆ ಎಂದರು.








