ಬೆಂಗಳೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಡಿನ್ನರ್ ಪಾರ್ಟಿ ಭಾರಿ ಸದ್ದು ಮಾಡುತ್ತಿದ್ದು, ಸಚಿವ ಸತೀಶ್ ಜಾರಕಿಹೊಳೆ ಡಿನ್ನರ್ ಪಾರ್ಟಿ ನೀಡಿದ್ದೇ ತಡ, ಇತ್ತ ಗೃಹ ಸಚಿವ ಡಾ.ಜಿ ಪರಮೇಶ್ವರ್ ವಿದೇಶದಿಂದ ಆಗಮಿಸಿದ ತಕ್ಷಣ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಡಿನ್ನರ್ ಪಾರ್ಟಿ ಆಯೋಜನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು.
ಆದರೆ ಹೈಕಮಾಂಡ್ ಖಡಕ್ ಸೂಚನೆ ಮೇರೆಗೆ ಇದೀಗ ಇಂದು ನಡೆಯಬೇಕಿದ್ದ ಡಿನ್ನರ್ ಪಾರ್ಟಿ ರದ್ದಾಗಿದೆ. ಈ ಕುರಿತು ಸಚಿವ ಜಿ ಪರಮೇಶ್ವರ ಡಿನ್ನರ್ ರದ್ದಾಗಿಲ್ಲ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ನಡೆಯಬೇಕಿದ್ದ ಔತಣಕೂಟ ರದ್ದಾಗಿಲ್ಲ ಬದಲಾಗಿ ಡಿನ್ನರ್ ಪಾರ್ಟಿ ದಿನಾಂಕ ಮುಂದೂಡಲಾಗಿದೆ. ಹೈಕಮಾಂಡ್ ಡಿನ್ನರ್ ಪಾರ್ಟಿಗೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎಂದು ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದರು.
ಡಿಕೆ ಶಿವಕುಮಾರ್ ಹೈಕಮಾಂಡ್ಗೆ ದೂರು ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಈ ಸಭೆಗೆ ಡಿಸಿಎಂ ಡಿಕೆ ಅವರನ್ನು ಕರೆಯಬೇಕು ಅಂತ ಚರ್ಚೆಯಾಗಿತ್ತು. ರಾಜಕಾರಣ ಮಾಡುವುದಾದರೆ ಓಪನ್ ಆಗಿ ಮಾಡುತ್ತೇವೆ. ಮುಚ್ಚಿಟ್ಟು ರಾಜಕಾರಣ ಮಾಡುವಂತದ್ದು ಏನೂ ಇಲ್ಲ. ದಲಿತ ಸಮುದಾಯದ ಮೇಲಿನ ದೌರ್ಜನ್ಯದ ಬಗ್ಗೆ ಚರ್ಚೆ ಆಗಬೇಕು. ಯಾರು ನಮ್ಮ ಸಭೆಯನ್ನು ಸಹಿಸುವುದಿಲ್ಲ ಅಂತ ಹೇಳಿಲ್ಲ. ನಮ್ಮ ಸಭೆ ಸಹಿಸಲ್ಲ ಅಂದರೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ನಮಗೆ ಆ ಶಕ್ತಿ ಇದೆ. ಈ ಸಭೆ ಮುಂದಕ್ಕೆ ಹಾಕಿದ್ದೇವೆ ಮತ್ತೆ ನಿಗದಿ ಆದಾಗ ಹೇಳುತ್ತೇವೆ. ಏನಾಗಿದೆ ಅಂತ ಎಲ್ಲಾ ಭಾಗವನ್ನು ಹೇಳಲು ಆಗುವುದಿಲ್ಲವಲ್ಲ ಎಂದು ಜಿ ಪರಮೇಶ್ವರ್ ತಿಳಿಸಿದರು.