xಧಾರವಾಡ : ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ತಂದೆಯ ತಲೆಯ ಮೇಲೆ, ಕಲ್ಲು ಎತ್ತಿ ಹಾಕಿ ಜಜ್ಜಿ ಭೀಕರವಾಗಿ ಮಗನೊಬ್ಬ ಕೊಲೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ನವಲಗುಂದ ತಾಲೂಕಿನ ತಲೆಮೊರಬ ಗ್ರಾಮದ ನಿವಾಸಿ ಅಡಿವೆಪ್ಪ ತಡಕೋಡ (57) ಎಂಬುವವರು ಹೆತ್ತ ಮಗನಿಂದಲೇ ಕೊಲೆಗೆ ಈಡಾಗಿದ್ದಾರೆ. ಇನ್ನು ಕೊಲೆ ಮಾಡಿದ ಮಗನನ್ನು ಶಿವಯೋಗಿ ಎಂದು ತಿಳಿದುಬಂದಿದೆ. ಶಿವಯೋಗಿ ಅದೇ ಗ್ರಾಮದಲ್ಲಿ ಅಕ್ರಮ ಸಂಬಂಧವೊಂದನ್ನು ಇಟ್ಟುಕೊಂಡಿದ್ದ. ಇದಕ್ಕೆ ಅಡಿವೆಪ್ಪ ವಿರೋಧ ವ್ಯಕ್ತಪಡಿಸಿ ತನ್ನ ಮಗನ ಜೀವನ ಚೆನ್ನಾಗಿರಲಿ ಎಂದು ಕನ್ಯೆ ನೋಡುವ ಶಾಸ್ತ್ರ ಕೂಡ ಇಟ್ಟುಕೊಂಡಿದ್ದ. ಅಡಿವೆಪ್ಪನ ಹತ್ಯೆಯಾಗುವ ಹಿಂದಿನ ರಾತ್ರಿ ಇದೇ ವಿಷಯಕ್ಕೆ ಮನೆಯಲ್ಲಿ ಮಗನೊಂದಿಗೆ ಜಗಳ ಕೂಡ ನಡೆದಿತ್ತಂತೆ.
ಕಳೆದ ನ.13 ರಂದು ತನ್ನ ಮನೆಯ ಪಕ್ಕದ ಶೆಡ್ನಲ್ಲಿ ಮಲಗಿದ ಜಾಗದಲ್ಲೇ ಬರ್ಬರವಾಗಿ ಹತ್ಯೆಗೀಡಾಗಿದ್ದ. ಅಡಿವೆಪ್ಪನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಆತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬೆಳಗಾಗುವಷ್ಟರಲ್ಲಿ ಅಡಿವೆಪ್ಪ ಹೆಣವಾಗಿದ್ದನ್ನು ಕಂಡು ಆತನ ಮನೆಯವರು ಕಕ್ಕಾಬಿಕ್ಕಿಯಾಗಿದ್ದರು. ಆದರೆ, ಅಡಿವೆಪ್ಪನ ಮಗ ಶಿವಯೋಗಿ ತನಗೇನೂ ಸಂಬಂಧವಿಲ್ಲ, ಅಮಾಯಕ ಎನ್ನುವ ರೀತಿಯಲ್ಲಿ ಮನೆಯ ಕಟ್ಟೆಯ ಮೇಲೆ ಕುಳಿತುಕೊಂಡಿದ್ದ.
ಆದರೆ ಅಡಿವೆಪ್ಪನನ್ನು ಹತ್ಯೆ ಮಾಡಿದ ಶಿವಯೋಗಿ ಮಾತ್ರ ತನಗೇನೂ ಸಂಬಂಧ ಇಲ್ಲ ಎನ್ನುವ ರೀತಿ ಇದ್ದ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ್ದ ಖಾಕಿ ಪಡೆ ಎಲ್ಲ ಕೆಲಸ ಮುಗಿಸಿದ ನಂತರ ಶಿವಯೋಗಿಯನ್ನು ತಮ್ಮ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದು ಎಂಬ ಸತ್ಯಾಂಶವನ್ನು ಹೊರ ಹಾಕಿದ್ದಾನೆ. ಸದ್ಯ ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ.