ಮಂಗಳೂರು: ಧರ್ಮಸ್ಥಳದಲ್ಲಿ ಯೂಟ್ಯೂಬರ್ ಗಳ ಮೇಲೆ ಹಲ್ಲೆ, ಗಲಾಟೆ ಹಾಗೂ ವರದಿಗೆ ತೆರಳಿದ್ದ ಪತ್ರಕರ್ತನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಪ್ರಕರಣಗಳು ದಾಖಲಾಗಿದ್ದು, 50 ರಿಂದ 100 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಧರ್ಮಸ್ಥಳದಲ್ಲಿ ನೇತ್ರಾವತಿ ಪಾಂಗಳದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 7ಕೇಸ್ ಗಳು ದಾಖಲಾಗಿವೆ. ಸ್ಥಳದಲ್ಲಿದ್ದ ಪೊಲೀಸರ ದೂರು ಆಧರಿಸಿ 4 ಎಫ್ಐಆರ್ ದಾಖಲಾಗಿದೆ. 3 ಸುಮೋಟೋ ಕೇಸ್ ದಾಖಲಾಗಿದೆ. ಅಕ್ರಮ ಕೂಟ ಕಟ್ಟಿ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ 50-100 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಧರ್ಮಸ್ಥಳದಲ್ಲಿ ನಿನ್ನೆ ದಿನ ಎರಡು ಗುಂಪುಗಳ ಮಧ್ಯೆ ಗುಂಪು ಘರ್ಷಣೆ ಯಾಕಾಗಿದೆ, ಯಾರು ಕಾರಣಕರ್ತರು, ಎರಡು ಗುಂಪಿನ ಉದ್ದೇಶ ಏನಿದೆ ಎಂಬುದರ ಕುರಿತು ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿದರು.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿನ ಜನಸಮುದಾಯ ಎಸ್ಐಟಿ ಮಾಡಲು ಒತ್ತಾಯಿಸಿದ್ದರು. ಬಹಳ ಎಚ್ಚರಿಕೆಯಿಂದ ಪರಿಶೀಲನೆ ಮಾಡಿ ಎಸ್ಐಟಿ ರಚಿಸಿದ್ದೇವೆ. ಅನಾಮಿಕ ವ್ಯಕ್ತಿ ಇಲ್ಲಿ ಕೊಲೆಯಾಗಿದೆ, ನಾನೇ ಅನೇಕ ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೆ ನೀಡಿದ್ದ. ಆ ವ್ಯಕ್ತಿ, ಮ್ಯಾಜಿಸ್ಟ್ರೇಟರ್ ಮುಂದೆ 164 ಹೇಳಿಕೆ ನೀಡಿದ್ದ. ಆತನ ಹೇಳಿಕೆ ಆಧರಿಸಿ ತನಿಖೆ ಮಾಡಬೇಕು ಎಂದು ಮ್ಯಾಜಿಸ್ಟ್ರೀಯಲ್ ಸೂಚನೆಯೂ ಇತ್ತು. ನಾವು ಕೂಡ ಸಾರ್ವಜನಿಕವಾಗಿ ಗಂಭೀರವಾಗಿ ಪರಿಗಣಿಸಿ ಎಸ್ಐಟಿ ಮಾಡಿದ್ದೇವೆ ಎಂದು ತಿಳಿಸಿದರು.