ಚಂಡೀಗಢ: ಲೋಕಸಭೆ ಚುನಾವಣೆ ಸಮೀಪದಲ್ಲಿ ಚಂಡೀಗಡದಲ್ಲಿ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದ್ದು, ಮಾಜಿ ಕೇಂದ್ರ ಸಚಿವ ಬಿರೇಂದರ್ ಸಿಂಗ್ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರುವುದಾಗಿ ಇಂದು ಹೇಳಿದರು. ಅವರ ಮಗ ಬ್ರಿಜೇಂದ್ರ ಸಿಂಗ್ ಸುಮಾರು ಒಂದು ತಿಂಗಳ ಹಿಂದೆ ಕಾಂಗ್ರೆಸ್‌ಗೆ ಸೇರಿದ್ದರು. ಬಿರೇಂದರ್ ಪತ್ನಿ ಪ್ರೇಮಲತಾ ಸಿಂಗ್ ಕೂಡ ಬಿಜೆಪಿ ತೊರೆದಿದ್ದಾರೆ.
ಕಾಂಗ್ರೆಸ್ ಜೊತೆಗಿನ ಸುಮಾರು ನಾಲ್ಕು ದಶಕಗಳ ಹಳೆಯ ಸಂಬಂಧವನ್ನು ಕಡಿದುಕೊಂಡ ನಂತರ ಬಿರೇಂದರ್ ಸಿಂಗ್ 2014 ರಲ್ಲಿ ಆಗಿನ ಪಕ್ಷದ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದರು.ಈ ವರ್ಷದ ಮಾರ್ಚ್ 10 ರಂದು, ಅವರ ಮಗ ಬ್ರಿಜೇಂದ್ರ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು.ಬಲವಾದ ರಾಜಕೀಯ ಕಾರಣಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಸೇರಿದರು. ಅಕ್ಟೋಬರ್ 2023 ರಲ್ಲಿ ಜಿಂದ್‌ನಲ್ಲಿ ನಡೆದ ರ್ಯಾಲಿಯಲ್ಲಿ ಸಿಂಗ್ ಪಕ್ಷಕ್ಕೆ ಅಲ್ಟಿಮೇಟಮ್ ನೀಡಿದ ಸುಮಾರು ಐದು ತಿಂಗಳ ನಂತರ ಬ್ರಿಜೇಂದ್ರ ಅವರು ಬಿಜೆಪಿಯನ್ನು ತೊರೆದಿದ್ದರು.
ಬಿರೇಂದರ್ ಸಿಂಗ್ ಅವರು ಸುಮಾರು 10 ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಸರ್ಕಾರದಲ್ಲಿ ಬಿರೇಂದರ್ ಸಿಂಗ್ ಕೇಂದ್ರ ಉಕ್ಕು ಸಚಿವರಾಗಿ ಸೇವೆಸಲ್ಲಿಸಿದ್ದರು. ಅಲ್ಲದೇ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.ಅಲ್ಲದೇ ಹರಿಯಾಣದ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿಯೂ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಈ ಕುರಿತಂತೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿರೇಂದರ್ ಸಿಂಗ್, ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಮತ್ತು ನನ್ನ ರಾಜೀನಾಮೆಯನ್ನು ಪಕ್ಷದ ಮುಖ್ಯಸ್ಥ ಜೆ.ಪಿ ನಡ್ಡಾ ಅವರಿಗೆ ಕಳುಹಿಸಿದ್ದೇನೆ. 2014-2019ರ ಅವಧಿಯಲ್ಲಿ ಶಾಸಕಿಯಾಗಿದ್ದ ನನ್ನ ಪತ್ನಿ ಪ್ರೇಮಲತಾ ಕೂಡ ಪಕ್ಷವನ್ನು ತೊರೆದಿದ್ದಾರೆ. ನಾಳೆ ನಾವು ಕಾಂಗ್ರೆಸ್‌ಗೆ ಸೇರುತ್ತೇವೆ ಎಂದು ತಿಳಿಸಿದ್ದಾರೆ.