ಬೆಳಗಾವಿ : ದೆಹಲಿಯಲ್ಲಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೇಂದ್ರ ಗುಪ್ತಚರ ಮಾಹಿತಿ ಪ್ರಕಾರ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸನ್ನದ್ಧವಾಗಿದೆ. ಆಡಳಿತ, ವಿಪಕ್ಷ ನಾಯಕರ ಸ್ವಾಗತಕ್ಕೆ ಕುಂದಾನಗರಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಕಲಾಪ ನಡೆಯಲಿರುವ ಸುವರ್ಣ ವಿಧಾನಸೌಧ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಚಳಿಗಾಲದ ಅಧಿವೇಶನಕ್ಕೆ ಈ ಬಾರಿಯೂ ಪ್ರತಿಭಟನೆಗಳ ಬಿಸಿ ತಟ್ಟಲಿದೆ.
ಡಿ.8ರಿಂದ 19ರ ವರೆಗೆ 10 ದಿನಗಳ ಕಾಲ ನಡೆಯಲಿರುವ ಅಧಿವೇಶನಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಧಿವೇಶನಕ್ಕೂ ಮುನ್ನಾದಿನವೇ (ಇಂದು) ಸುವರ್ಣ ವಿಧಾನಸೌಧ ಮುಖ್ಯದ್ವಾರ, ಪ್ರವೇಶ ದ್ವಾರ ಸೇರಿದಂತೆ ಇಡೀ ಸೌಧದ ಸುತ್ತಲೂ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ವಾಹನ, ಸಾರ್ವಜನಿಕರನ್ನು ತಪಾಸಣೆ ಮಾಡಿಯೇ ಪೊಲೀಸರು ಒಳಬಿಡುತ್ತಿದ್ದಾರೆ.
ಅಧಿವೇಶನದ ಭದ್ರತೆಗೆ ಈ ಬಾರಿ ಅತೀ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 6 ಸಾವಿರಕ್ಕೂ ಅಧಿಕ ಪೊಲೀಸರು ನಿಯೋಜನೆಗೊಂಡಿದ್ದಾರೆ. 146 ಪೊಲೀಸ್ ಅಧಿಕಾರಿಗಳು, 3,820 ಪೊಲೀಸ್ ಸಿಬ್ಬಂದಿ, 500 ಗೃಹ ರಕ್ಷಕ ದಳದ ಸಿಬ್ಬಂದಿ, 8 ಕ್ವಿಕ್ ರೆಸ್ಪಾನ್ಸ್ ಟೀಂ, 10 ಡಿಎಆರ್ ಪ್ರಹಾರ ದಳ, 35 ಕೆಎಸ್ಆರ್ಪಿ ತುಕಡಿ, 1 ಬಿಡಿಡಿಎಸ್ ತಂಡ, 1 ಗರುಡಾ ಫೋರ್ಸ್, 16 ವಿಧ್ವಂಸಕ ಕೃತ್ಯ ತಪಾಸಣಾ ತಂಡಗಳಿಂದ ಭದ್ರತೆ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಭದ್ರತಾ ಕಣ್ಗಾವಲಿಗೆ 11 ಡ್ರೋನ್ ಬಳಸಲಾಗುತ್ತಿದೆ.








