ಬೆಂಗಳೂರು: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ. ನಾಳೆ ಸಂಜೆ 4:05ಕ್ಕೆ ರಾಜಧಾನಿಯ ಲೋಕಭವನದಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಅವರು ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಲೋಕಭವನದಲ್ಲಿ ಭರ್ಜರಿ ಸಿದ್ಧತೆ
ಡಿಕೆಶಿ ಅವರ ಪಟ್ಟಾಭಿಷೇಕದ ಹಿನ್ನೆಲೆಯಲ್ಲಿ ಲೋಕಭವನದಲ್ಲಿ ಯುದ್ಧೋಪಾದಿಯಲ್ಲಿ ಸಿದ್ಧತೆಗಳು ಆರಂಭವಾಗಿವೆ. ಲೋಕಭವನ ಹಾಗೂ ವಿಧಾನಸೌಧದ ಸುತ್ತಮುತ್ತಲ ಪ್ರದೇಶಗಳಲ್ಲಿ ಡಿ.ಕೆ. ಶಿವಕುಮಾರ್ ಅವರ ಬೃಹತ್ ಕಟೌಟ್ಗಳು ಮತ್ತು ಬ್ಯಾನರ್ಗಳನ್ನು ಅಳವಡಿಸಲಾಗಿದ್ದು, ಇಡೀ ಪರಿಸರ ಹಬ್ಬದ ವಾತಾವರಣವನ್ನು ನೆನಪಿಸುತ್ತಿದೆ.
ಅಭಿಮಾನಿಗಳಿಗೆ ಎಲ್ಇಡಿ ಪರದೆ ವ್ಯವಸ್ಥೆ
ರಾಜ್ಯದ ಮೂಲೆ ಮೂಲೆಗಳಿಂದ ಹರಿದುಬರಲಿರುವ ಲಕ್ಷಾಂತರ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ಅನುವಾಗುವಂತೆ ಲೋಕಭವನದ ಸುತ್ತಮುತ್ತ ಬೃಹತ್ ಎಲ್ಇಡಿ (LED) ಪರದೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಭದ್ರತೆ ಹಾಗೂ ಸುಗಮ ಸಂಚಾರಕ್ಕಾಗಿ ಪೊಲೀಸ್ ಇಲಾಖೆಯೂ ಸಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.








