ಬೆಂಗಳೂರು: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಜನರಿಗೆ ಎಟುಕದಂತಾಗುತ್ತಿರುವ ದುಬಾರಿ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗಳ ಶುಲ್ಕವನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಸರ್ಕಾರ ಹೊಸ ಕರಡು ಮಸೂದೆಯನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಜಾರಿಗೆ ತರುವ ಸಾಧ್ಯತೆಯಿದೆ.
ಖಾಸಗಿ ವೈದ್ಯಕೀಯ ಸಂಸ್ಥೆಗಳು ವಿಧಿಸುತ್ತಿರುವ ಭಾರಿ ಚಿಕಿತ್ಸಾ ಶುಲ್ಕಗಳು ಸಾರ್ವಜನಿಕರ ಟೀಕೆಗೆ ಒಳಗಾಗುತ್ತಲೇ ಬರುತ್ತಿದೆ. ದುಬಾರಿ ಶುಲ್ಕ ವಿಧಿಸುವ ಮೂಲಕ ಆರೋಗ್ಯ ಸೇವೆ ಕೈಗೆಟುಕದ ಪರಿಸ್ಥಿತಿ ಎದುರಾಗಿದೆ. ಅನಿರ್ಬಂಧಿತ ಚಿಕಿತ್ಸಾ ಶುಲ್ಕದ ಮೂಲಕ ಸಾರ್ವಜನಿಕರ ಮೇಲೆ ಭಾರಿ ಹೊರೆ ಬೀಳುತ್ತಿದೆ. ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವ ಮೂಲಕ ಖಾಸಗಿ ಆಸ್ಪತ್ರೆಗಳು ಬಡವರ ಕೈಗೆ ಸಿಗದಂತಾಗಿವೆ.
ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕಲು ಸಾರ್ವಜನಿಕರು ಪದೇ ಪದೆ ಆಗ್ರಹಿಸುತ್ತಿದ್ದರೂ ಸರ್ಕಾರಕ್ಕೆ ಅದರ ನಿಯಂತ್ರಣ ಸಾಧ್ಯವಾಗಿಲ್ಲ. 2016ರಲ್ಲಿ ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದಾಗ ಖಾಸಗಿ ಆಸ್ಪತ್ರೆಗಳ ಆಟಾಟೋಪಕ್ಕೆ ಕಠಿಣವಾಣ ಹಾಕಲು ಸರ್ಕಾರ ಮುಂದಾಗಿತ್ತು. ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕುವುದು, ಪಾರದರ್ಶಕತೆ ತರುವುದು, ದರಪಟ್ಟಿಯನ್ನು ಪ್ರದರ್ಶಿಸುವ ನಿಯಮಗಳೊಂದಿಗೆ ಕಾನೂನು ತರಲು ಸಜ್ಜಾಗಿತ್ತು.
ಆದರೆ, ಅದಕ್ಕೆ ಭಾರಿ ವಿರೋಧ ವ್ಯಕ್ತವಾದ ಕಾರಣ ಅದರ ಅನುಷ್ಠಾನ ನಿರೀಕ್ಷೆಯಂತೆ ಸಾಧ್ಯವಾಗಿರಲಿಲ್ಲ. ಇದೀಗ ಸರ್ಕಾರ ಹೊಸ ಕಾನೂನು ತರಲು ಮುಂದಾಗಿದ್ದು, ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ಶುಲ್ಕ, ದರ, ಕಾರ್ಯನಿರ್ವಹಣೆ ಮೇಲೆ ನಿಯಂತ್ರಣ ಹಾಗೂ ನಿಗಾ ಇಡಲು ಮುಂದಾಗಿದೆ.








