ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ವಿಧಾನಪರಿಷತ್ತಿನ 7 ಸ್ಥಾನಗಳ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ಬೆಂಗಳೂರಿನ ವಿಧಾನಸೌಧದ ಕಮಿಟಿ ಕೊಠಡಿಯಲ್ಲಿ ಬಿರುಸಿನಿಂದ ಆರಂಭಗೊಂಡಿದೆ. ಈ ಬಾರಿಯ ಚುನಾವಣಾ ಕಣದಲ್ಲಿ ಕಾಂಗ್ರೆಸ್ನಿಂದ 5, ಬಿಜೆಪಿಯಿಂದ 2 ಹಾಗೂ ಜೆಡಿಎಸ್ನಿಂದ ಒಬ್ಬ ಅಭ್ಯರ್ಥಿ ಸೇರಿದಂತೆ ಒಟ್ಟು ಎಂಟು ಜನ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಜಯದ ಲೆಕ್ಕಾಚಾರಗಳು ನಡೆಯುತ್ತಿರುವ ಬೆನ್ನಲ್ಲೇ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಆದರೆ, ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಬಿಜೆಪಿಯಿಂದ ಉಚ್ಛಾಟಿತರಾಗಿರುವ ಉತ್ತರ ಕನ್ನಡದ ಶಾಸಕ ಶಿವರಾಂ ಹೆಬ್ಬಾರ್ ಹಾಗೂ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಅವರು ಅಡ್ಡ ಮತದಾನ (ಕ್ರಾಸ್ ವೋಟಿಂಗ್) ಮಾಡಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿ ಹಬ್ಬಿವೆ. ಇದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ತಮ್ಮ ಮತದಾನದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ಶಿವರಾಂ ಹೆಬ್ಬಾರ್, “ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಾಗಲಿ ಅಥವಾ ಜೆಡಿಎಸ್ ನಾಯಕರಾಗಲಿ ನಮ್ಮನ್ನು ಸೌಜನ್ಯಕ್ಕಾದರೂ ಸಂಪರ್ಕಿಸಿಲ್ಲ, ಮತ ಕೇಳುವ ಪ್ರಯತ್ನವನ್ನೂ ಮಾಡಿಲ್ಲ. ಹಾಗಾಗಿ, ನಾನು ಯಾವುದೇ ಪಕ್ಷದ ಮುಲಾಜಿಗೆ ಒಳಗಾಗದೆ ನನ್ನ ಆತ್ಮಸಾಕ್ಷಿಯಂತೆ ಮತದಾನ ಮಾಡಿದ್ದೇನೆ,” ಎಂದು ಹೇಳುವ ಮೂಲಕ ತಾವೂ ಪಕ್ಷದ ನಿರ್ಧಾರದ ವಿರುದ್ಧ ಮತ ಚಲಾಯಿಸಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಇದೇ ವೇಳೆ ಮತ್ತೊಬ್ಬ ಶಾಸಕ ಎಸ್.ಟಿ. ಸೋಮಶೇಖರ್ ಅವರು ಕಾಂಗ್ರೆಸ್ ನಾಯಕರೊಂದಿಗಿನ ಸಂಪರ್ಕವನ್ನು ಬಹಿರಂಗಪಡಿಸಿದ್ದು, “ನಿನ್ನೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನನ್ನನ್ನು ಕರೆಸಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ನನ್ನ ಕ್ಷೇತ್ರದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಯಾರು ಸ್ಪಂದಿಸುತ್ತಾರೋ, ಅವರಿಗೇ ನಾವು ಸ್ಪಂದಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಗೋವಿಂದರಾಜು ಒಳ್ಳೆಯವರೇ ಆದರೂ ನಮ್ಮನ್ನು ಸಂಪರ್ಕಿಸಿಲ್ಲ,” ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ಜೆಡಿಎಸ್ನ ಹಿರಿಯ ಶಾಸಕ ಜಿ.ಟಿ. ದೇವೇಗೌಡ ಅವರು ಕೂಡ ಮತದಾನದ ಬಳಿಕ ಅಚ್ಚರಿಯ ಹೇಳಿಕೆ ನೀಡಿದ್ದಾರೆ. “ನಾನು ಕೂಡ ನನ್ನ ಆತ್ಮಸಾಕ್ಷಿಯಂತೆ ಮತ ಹಾಕಿದ್ದೇನೆ,” ಎಂದು ಅವರು ತಿಳಿಸಿದ್ದು, ಜೆಡಿಎಸ್ ಪಾಳಯದಲ್ಲೂ ಆತಂಕ ಮೂಡಿಸಿದೆ. ಜಿ.ಟಿ. ದೇವೇಗೌಡರು ಕೂಡ ಮೈತ್ರಿಕೂಟದ ಅಭ್ಯರ್ಥಿಯನ್ನು ಕೈಬಿಟ್ಟು ಅಡ್ಡ ಮತದಾನ ಮಾಡಿರಬಹುದು ಎಂಬ ಶಂಕೆ ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.
ಒಟ್ಟಾರೆಯಾಗಿ, ಒಂದು ವೇಳೆ ಈ ಮೂವರು ಪ್ರಭಾವಿ ಶಾಸಕರು ಅಧಿಕೃತವಾಗಿ ಅಡ್ಡ ಮತದಾನ ಮಾಡಿರುವುದು ಖಾತ್ರಿಯಾದರೆ, ಅದು ಬಿಜೆಪಿ-ಜೆಡಿಎಸ್ ಮೈತ್ರಿಗೆ ಎದುರಾಗಲಿರುವ ಬಿಗ್ ಶಾಕ್ ಎಂದೇ ವಿಶ್ಲೇಷಿಸಲಾಗುತ್ತಿದೆ. ಪ್ರತಿಪಕ್ಷಗಳ ಈ ಆಂತರಿಕ ಅಸಮಾಧಾನ ಮತ್ತು ಕ್ರಾಸ್ ವೋಟಿಂಗ್ ಲೆಕ್ಕಾಚಾರಗಳು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಲಾಭ ತಂದುಕೊಡಲಿದ್ದು, ಪರಿಷತ್ ಚುನಾವಣೆಯ ಫಲಿತಾಂಶದಲ್ಲಿ ತಲೆಕೆಳಗಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.








