ಚಿಕ್ಕಬಳ್ಳಾಪುರ : ಕೋಲಾರ -ಚಿಕ್ಕಬಳ್ಳಾಪುರ ಕೇಂದ್ರ ಸಹಕಾರ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ 9.86 ಕೋಟಿ ರೂಪಾಯಿ ಅವ್ಯವಹಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಕೋಲಾರ, ಕೆಜಿಎಫ್, ಚಿಂತಾಮಣಿ ತಾಲ್ಲೂಕು ಶಾಖೆಗಳ ವ್ಯವಸ್ಥಾಪಕರನ್ನು ಅಮಾನತು ಮಾಡಲಾಗಿದೆ.
ಹೌದು ಕೋಲಾರ ಶಾಖೆಯಲ್ಲಿ 1.50 ಕೋಟಿ ರೂ., ಕೆಜಿಫ್ ನಲ್ಲಿ 4.17 ಕೋಟಿ ರೂ., ಚಿಂತಾಮಣಿ ಶಾಖೆಯಲ್ಲಿ 2.23 ಕೋಟಿ ರೂ. ಹಣ ದುರ್ಬಳಕೆಯಾಗಿದೆ. ಈ ಹಿನ್ನೆಲೆಯಲ್ಲಿ ವ್ಯವಸ್ಥಾಪಕರಾದ ಎಂ. ಅಮರೇಶ್, ಜಿ.ಎನ್. ಗಿರೀಶ್, ಜಿ. ನಾಗರಾಜ್ ಅವರ ವಿರುದ್ಧ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ.
ಈ ಅಕ್ರಮ ಕುರಿತಂತೆ ಮುನೀಶ್ ಎಂಬುವವರು ದೂರು ನೀಡಿದ್ದರು. ಹಾಗಾಗಿ ಬ್ಯಾಂಕಿನ ಆಂತರಿಕ ಪರೀಕ್ಷಣಾ ತಂಡ ತನಿಖೆ ಕೈಗೊಂಡಿತ್ತು. 2017 -18ನೇ ಸಾಲಿನಿಂದ 2020 -21ನೇ ಸಾಲಿನವರೆಗೆ ನಡೆದ ಅಕ್ರಮಗಳ ತನಿಖೆ ನಡೆಸಿದಾಗ ಈ ಅವ್ಯವಹಾರ ಬೆಳಕಿಗೆ ಬಂದಿದೆ. ಹಾಗಾಗಿ ಮೂವರು ವ್ಯವಸ್ಥಾಪಕರನ್ನು ಇದೀಗ ಸಸ್ಪೆಂಡ್ ಮಾಡಲಾಗಿದೆ.