ಬೆಂಗಳೂರು : ಕೋವಿಡ್-19 ಸಂದರ್ಭದಲ್ಲಿ ಮಾಸ್ಕ್, ಪಿಪಿಇ ಕಿಟ್ ಹಾಗೂ ಇತರೆ ಸಲಕರಣೆಗಳ ಖರೀದಿಯಲ್ಲಿ ಸುಮಾರು 167 ಕೋಟಿ ರು. ಅವ್ಯವಹಾರ ನಡೆದಿರುವ ಆರೋಪ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದು ಈ ಅಕ್ರಮ ಸಂಬಂಧ ದಾಖಲಾದ ಮೊದಲ ಎಫ್‌ಐಆರ್ ಆಗಿದೆ ಎನ್ನಲಾಗಿದೆ.
ಹೌದು ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ವಕ್ಫ್, ಪಂಚಮಸಾಲಿ ಮೀಸಲಾತಿ ವಿಚಾರಗಳು ಆಡಳಿತ-ವಿರೋಧ ಪಕ್ಷಗಳ ನಡುವೆ ಗದ್ದಲ ಗಲಾಟೆ ಕೋಲಾಹಲದ ನಡುವೆ ಕೋವಿಡ್ ಸಂದರ್ಭದಲ್ಲಿ ನಡೆದಂತಹ ಕೋಟ್ಯಾಂತರ ರೂಪಾಯಿ ಅವ್ಯವಹಾರ ಇದೀಗ ಮುನ್ನೆಲೆಗೆ ಬಂದಿದೆ. ಈ ನೆಲೆಯಲ್ಲಿ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಮೊದಲ fir ದಾಖಲಾಗಿದೆ.
ಕೋವಿಡ್-19 ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮುಖಾಂತರ ಕೋವಿಡ್ ನಿವಾರಣೆಗಾಗಿ ಅತ್ಯವಶ್ಯವಿದ್ದ ಎನ್ 95 ಮಾಸ್ಕ್, ಪಿಪಿಇ ಕಿಟ್ ಹಾಗೂ ಇತರೆ ಸಾಮಗ್ರಿಗಳ ಖರೀದಿ ವೇಳೆ ಸರ್ಕಾರ ನೇಮಿಸಿದ್ದ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ಹಾಗೂ ಇತರರು ಸೇರಿ ಕೊಂಡು ಕೆಟಿಟಿಪಿ ಕಾನೂನು ಮತ್ತು ಇತರೆ ಕಾನೂನುಗಳನ್ನು ಉಲ್ಲಂಘಿಸಿ ನೂರಾರು ಕೋಟಿ ರು. ಹಣ ದುರ್ಬಳಕೆ ಮಾಡಿದ್ದಾರೆ.
ರಾಜ್ಯದ 17 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಬಳಸಲು ರಾಜ್ಯ ಸರ್ಕಾರ 2020ರ ಆಗಸ್ 18ರಂದು 2.59 ಲಕ್ಷಎನ್ 95 ಮಾಸ್ಕ್ ಮತ್ತು 2.59 ಲಕ್ಷಪಿಪಿಇ ಕಿಟ್‌ಗಳನ್ನು ಒಟ್ಟು 41.35 ಕೋಟಿ ರು. ಮೌಲ್ಯದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಇವುಗಳ ಖರೀದಿ ವೇಳೆ ಕೆಟಿಟಿಪಿ ಕಾಯ್ದೆ ಪಾಲಿಸುವಂತೆ ಷರತ್ತು ವಿಧಿಸಿತ್ತು.
ನಂತರ ವೈದ್ಯಕೀಯ ಶಿಕ್ಷಣ ಇಲಾಖೆಯು ಟೆಂಡರ್ ಕರೆದಿದ್ದು, ಲಾಜ್ ಕೋರ್ಟ್ಸ್ ಸಂಸ್ಥೆಯು ಒಂದು ಪಿಪಿಇ ಕಿಟ್ ಸರಬರಾಜು ಮಾಡುವುದಾಗಿ ಬಿಡ್ ಪಡೆದುಕೊಂಡಿತ್ತು. ನಿಗದಿತ ಸಂಖ್ಯೆಯ ಪಿಪಿಇ ಕಿಟ್‌ಗಳನ್ನು 15 ದಿನಗಳೊಳಗೆ ಸರಬರಾಜು ಮಾಡಲು ಆದೇಶಿಸಿದ್ದರೂ ಪಿಇಇ ಕಿಟ್ ಗಳನ್ನು 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೀಡಿರುವ ಬಗ್ಗೆ ಯಾವುದೇ ದಾಖಲೆಗಳಲ್ಲಿ ನಮೂದಿಸಿಲ್ಲ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಮುಂಬೈ ಮೂಲದ ಪೂಡೆಂಟ್ ಮ್ಯಾನೇಜೆಂಟ್ ಸಲೂಷನ್ಸ್ ಟೆಂಡರ್ನಲ್ಲಿ ಭಾಗವಹಿಸದೇ ಕಾನೂನುಬಾಹಿರವಾಗಿ ಬಿಡ್ ಪಡೆದು ಕೋಟ್ಯಂತರ ರೂ. ಅಕ್ರಮದಲ್ಲಿ ಭಾಗಿಯಾಗಿದೆ. ಮೇಲಿನ ಡಿಎಂಇ ಅಂದಿನ ನಿರ್ದೇಶಕರ ಡಾ.ಪಿ.ಜಿ.ಗಿರೀಶ್, ಜಂಟಿ ನಿಯಂತ್ರಕರು ರಾಜ್ಯ ಲೆಕ್ಕಪತ್ರ ಇಲಾಖೆಯ ರಘು ಜಿ.ಪಿ. ಮತ್ತು ಆರೋಗ್ಯ ಸಲಕರಣಾಧಿಕಾರಿ ಮುನಿರಾಜು ಮತ್ತು ದೊಡ್ಡ ಮಟ್ಟದಲ್ಲಿ ಹಿಂದಿನ ಸರ್ಕಾರ ರಾಜಕೀಯ ಪ್ರತಿನಿಧಿಗಳು ಅಧಿಕಾರಿಗಳು ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಭಾರೀ ಪ್ರಮಾಣದ ಕೋವಿಡ್ ಹಗ ರಣದ ತನಿಖೆಗೆ ರಾಜ್ಯ ಸರ್ಕಾರ ಎಸ್ ಐಟಿ ರಚಿಸುವ ಸಾಧ್ಯತೆಯಿದೆ. ಎಫ್ ಐಆರ್ ದಾಖಲಾದ ಬೆನ್ನಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಇಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸುವ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ರಾಜಕೀಯ ಪ್ರತಿನಿಧಿಗಳಿಗೂ ವಿಚಾರಣೆ ನಡೆಯುವುದು ನಿಶ್ವಿತವಾಗಿದ್ದು, ಸಮಗ್ರ ವಿಚಾರಣೆಗೆ ಸಿಐಡಿ ಅಥವಾ ಪ್ರತ್ಯೇಕ ಎಸ್ಐಟಿ ರಚಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.