ದಕ್ಷಿಣಕನ್ನಡ : ದಕ್ಷಿಣಕನ್ನಡದಲ್ಲಿ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿದ್ದ ಅಭಿವೃದ್ಧಿ ಕಾಮಗಾರಿಯ ವೇಳೆ ಭಾರೀ ಕ್ರೇನ್ ಒಂದು ರೈಲ್ವೆ ಹಳಿಯ ಮೇಲೆ ಮಗುಚಿ ಬಿದ್ದಿದ್ದು, ಅದೃಷ್ಟವಶಾತ್ ಹೆಚ್ಚಿನ ಅನಾಹುತ ತಪ್ಪಿದೆ.
ಘಟನೆಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೆಲಕಾಲ ರೈಲು ಸಂಚಾರಕ್ಕೂ ಅಡಚಣೆ ಉಂಟಾಯಿತು. ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ ಸಮೀಪ ಬುಧವಾರ ಕಾಮಗಾರಿ ನಡೆಸಲು ಹಳಿಯ ಪಕ್ಕದಲ್ಲಿ ಕ್ರೇನ್ ಬಳಸಲಾಗುತ್ತಿತ್ತು. ಈ ವೇಳೆ ತಾಂತ್ರಿಕ ದೋಷ ಅಥವಾ ನೆಲದ ಕುಸಿತದಿಂದ ಸಮತೋಲನ ಕಳೆದುಕೊಂಡ ಪರಿಣಾಮ ಕ್ರೇನ್ ಏಕಾಏಕಿ ಪಲ್ಟಿಯಾಗಿ ನೇರವಾಗಿ ರೈಲ್ವೆ ಹಳಿಯ ಮೇಲೆ ಉರುಳಿದೆ.
ಘಟನೆ ಸಂಭವಿಸಿದ ತಕ್ಷಣ ರೈಲ್ವೆ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಹಳಿಯ ಮೇಲೆ ಮಗುಚಿ ಬಿದ್ದ ಕ್ರೇನ್‌ನ್ನು ತೆರವುಗೊಳಿಸಲು ಮತ್ತೊಂದು ಯಂತ್ರದ ಸಹಾಯದಿಂದ ಕಾರ್ಯಾಚರಣೆ ನಡೆಸಲಾಯಿತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಾತ್ರವಲ್ಲದೇ ಈ ವೇಳೆ, ಯಾವುದೇ ರೈಲುಗಳು ಆಗಮಿಸದ ಹಿನ್ನೆಲೆಯಲ್ಲಿ ಭಾರಿ ದುರಂತವೊಂದು ತಪ್ಪಿದೆ.








