ಕಲಬುರ್ಗಿ : ಇತ್ತೀಚಿಗೆ ಬೆಂಗಳೂರು, ತುಮಕೂರು ಚಿಕ್ಕಮಂಗಳೂರು ಭಾಗಗಳಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿತ್ತು. ಇದೀಗ ಹೊಲವೊಂದರಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಅದನ್ನು ಕೊಂದು ತಿಂದಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಯಾಗಾಪುರ ತಾಂಡದಲ್ಲಿ ನಡೆದಿದೆ.
ಯಾಗಾಪುರ ತಾಂಡಾದ ನಿವಾಸಿ ಲಕ್ಷ್ಮಣ ಸೇವಾನಾಥ ಚವ್ಹಾಣ ಎನ್ನುವವರು ತಮ್ಮ ಹೊಲದಲ್ಲಿ ಶುಕ್ರವಾರ ರಾತ್ರಿ ಹಸುವನ್ನು ಕಟ್ಟಿ ಹಾಕಿ ಮನೆಗೆ ಹೋದ ಬಳಿಕ ಚಿರತೆ ದಾಳಿ ಮಾಡಿದೆ ಎನ್ನಲಾಗಿದೆ.
ಬೆಳಗ್ಗೆ ಹೊಲಕ್ಕೆ ಬಂದಾಗ ಹಸು ಕಾಣಲಿಲ್ಲ, ಕೂಡಲೇ ಭಯಭೀತರಾಗಿ ಹುಡುಕಾಡಲು ಶುರುಮಾಡಿದ್ದಾರೆ. ಸ್ವಲ್ಪ ದೂರದಲ್ಲಿ ಹಸುವನ್ನು ಚಿರತೆ ಕೊಂದು ತಿಂದಿರುವುದು ಗಮನಕ್ಕೆ ಬಂದಿದೆ. ಇದರಿಂದ ತಾಂಡಾದ ನಿವಾಸಿಗಳು ಭಯಭೀತರಾಗಿದ್ದಾರೆ.ಹೀಗಾಗಿ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯುವಂತೆ ರೈತರು ಆಗ್ರಹಿಸಿದ್ದಾರೆ.