ಚಾಮರಾಜನಗರ : ಚಾಮರಾಜನಗರದಲ್ಲಿ ಸಂಪುಟ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಅವರಿಗೆ ಕೋವಿಡ್ ಸಂದರ್ಭದಲ್ಲಿನ ಕೆಲವು ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿರುವ ಘಟನೆ ಇದೀಗ ವರದಿಯಾಗಿದೆ.
ಕಳೆದ 2021ರ ಮೇ 2 ರಂದು ಚಾಮರಾಜನಗರದಲ್ಲಿ ಈ ಘಟನೆ ನಡೆದಿದ್ದು, ಕೋವಿಡ್ ವೇಳೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 36 ಜನ ಸಾವನ್ನಪ್ಪಿದರು.ಇದೀಗ ದುರಂತದ ಮೃತರ ಸಂತ್ರಸ್ತ ಕುಟುಂಬಗಳು ರಾಜ್ಯದ ಕಾಂಗ್ರೆಸ್ ಸರಕಾರ ನೀಡಿದ್ದ ಸರಕಾರಿ ನೌಕರಿ ಮತ್ತು ಪರಿಹಾರದ ಭರವಸೆ ಈಡೇರದಿರುವುದರಿಂದ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿವೆ.
ಹೌದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ವೇಳೆ, ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತ್ರಸ್ತ ಕುಟುಂಬಕ್ಕೆ ಸರಕಾರಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಈ ಭರವಸೆ ಈಡೇರದೆ ಇರೋದ್ರಿಂದ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ರು.
ಅಲ್ಲದೆ ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಬಸವಣ್ಣನವರ ಪ್ರತಿಮೆ ಅಣಾವರಣಕ್ಕೆ ಆಗಮಿಸಿದ್ದರು. ಈ ವೇಳೆ ಸಿಎಂ ಸಂತ್ರಸ್ತರ ಮನವಿಯನ್ನು ಕೇಳಿಸಿಕೊಳ್ಳದೆ ನಿರ್ಲಕ್ಷ ತೋರಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂತ್ರಸ್ತ ಕುಟುಂಬಸ್ಥರು ನಮ್ಮ ಸಾವಿಗೆ ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.