ಬೆಂಗಳೂರು : ಕೋವಿಡ್ ಸಂದರ್ಭದಲ್ಲಿ ಮಾಸ್ಕ್, ಪಿಪಿಇ ಕಿಟ್ ಹಾಗೂ ಇತರೆ ಸಲಕರಣೆಗಳನ್ನು ಖರೀದಿ ಮಾಡುವ ಸಂದರ್ಭದಲ್ಲಿ ಸುಮಾರು 167 ಕೋಟಿ ರೂಪಾಯಿಗೂ ಅವ್ಯವಹಾರ ನಡೆದಿದೆ ಎಂದು ನಿನ್ನೆ ಬೆಂಗಳೂರಿನ ವಿಧಾನಸೌಧದಲ್ಲಿ ಮೊದಲ ಎಫ್ಐಆರ್ ದಾಖಲಾಗಿತ್ತು. ಇದೀಗ ಕೋವಿಡ್-19 ಸಂದರ್ಭದಲ್ಲಿನ ಅವ್ಯವಹಾರದ ಕುರಿತು ನ್ಯಾಯಮೂರ್ತಿ ಮೈಕಲ್ ಕುನ್ಹಾ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದ ವರದಿ ಆಧರಿಸಿ ಬಿಬಿಎಂಪಿಯ 28 ಅಧಿಕಾರಿಗಳಿಗೆ ನೋಟಿಸ್ ಸಿದ್ದಪಡಿಸಿದೆ.
ಈಗಾಗಲೇ ಕೋವಿಡ್ ನಿರ್ವಹಣೆ ವೇಳೆ ರಾಜ್ಯದಲ್ಲಿ ಮಾಸ್ಕ್, ಪಿಪಿಇ ಕಿಟ್ ಹಾಗೂ ಇತರೆ ಸಲಕರಣೆ ಖರೀದಿಯಲ್ಲಿ ಸುಮಾರು 167 ಕೋಟಿ ರೂ. ಅಕ್ರಮವಾಗಿದೆ ಎಂಬುದರ ಎಂಬುದರ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದೆ. ಇದರ ಬೆನ್ನಲೇ ಇದೀಗ ಬಿಬಿಎಂಪಿಯ 28 ಅಧಿಕಾರಿಗಳಿಗೆ ನೋಟಿಸ್ ನೀಡುವುದಕ್ಕೆ ಅಂತಿಮ ತಯಾರಿ ಮಾಡಿಕೊಳ್ಳಲಾಗಿದೆ.ಸೋಮವಾರ ಅಥವಾ ಮಂಗಳವಾರದ ವೇಳೆಗೆ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ನೋಟಿಸ್‌ನಲ್ಲಿ ಏನಿದೆ?:
ಅಧಿಕಾರಿಗಳ ಹೆಸರು, ಕೋವಿಡ್ ಅವಧಿಯಲ್ಲಿ ಬಿಬಿಎಂಪಿ ಯಾವ ವಲಯ, ವಿಭಾಗದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಪ್ರಸ್ತುತ ಯಾವ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನ್ಯಾ.ಮೈಕಲ್ ಕುನ್ಹಾ ಆಯೋಗ ವರದಿಯಲ್ಲಿ ಆಕ್ಷೇಪಣೆ ವ್ಯಕ್ತವಾದ ಕೋವಿಡ್ 19 ಅವಧಿಯಲ್ಲಿ ತಮ್ಮ ಅಧಿಕಾರ ಬಳಕೆ ಮಾಡಿಕೊಂಡು ವೆಚ್ಚದ ಕುರಿತು ಸಮಜಾಯಿಷಿ ವಿವರಣೆ ನೀಡುವಂತೆ ಸೂಚಿಸಲಾಗಿದೆ. ಈ ಕುರಿತು ಸಂಬಂಧಪಟ್ಟ ಆಯೋಗ ವರದಿ ಪ್ರತಿ ಲಭ್ಯವಿದೆ. ಅಗತ್ಯವಿದ್ದರೆ ಪಡೆದು ಉತ್ತರ ನೀಡುವಂತೆ ಸೂಚಿಸಲಾಗಿದೆ.