ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಕೋಲ್ಕತ್ತಾದಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಈ ವೇಳೆ ನ್ಯಾಯಾಧಿಶರ ಬಳಿ ಸರ್ಕಾರಿ ಪರ ವಕೀಲರು ಇಬ್ಬರು ಆರೋಪಿಗಳನ್ನು ಎನ್‌ಐಎ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಆದರೆ ನ್ಯಾಯಾಧೀಶರು ಹತ್ತು ದಿನ ಎನ್‌ಐಎ ವಶಕ್ಕೆ ನೀಡಿದರು. ಪ್ರಕರಣದ ಸೂತ್ರಧಾರಿ ಶಿವಮೊಗ್ಗ ಐಸಿಸ್ ಮ್ಯಾಡುಲ್ನ ಮಾಸ್ಟರ್ ಮೈಂಡ್ ಆಗಿರುವ ಅಬ್ದುಲ್ ಮತೀನ್ ತಾಹ ಹಾಗೂ ಬಾಂಬ್ ಇಟ್ಟಿದ್ದ ಶಿವಮೊಗ್ಗ ಮುಸಾವೀರ್ ಹುಸೇನ್ನನ್ನು ಶುಕ್ರವಾರ ಬೆಳಗ್ಗೆ ಕೊಲ್ಕತ್ತಾದ ಮೇದಿನಿಪುರ ಹೋಟೆಲ್ನಲ್ಲಿ ಬಂಧಿಸಲಾಗಿತ್ತು.
ಇನ್ನೂ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ಯುವ ಮುನ್ನ ಉಗ್ರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಸೆಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿ ಅವರ ಆರೋಗ್ಯವನ್ನು ಟೆಸ್ಟ್ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಎನ್‌ಐಎ ಅಧಿಕಾರಿಗಳು ಸ್ಥಳ ಮಹಜರು ಸೇರಿದಂತೆ ಹಲವು ಮಾಹಿತಿಗಳನ್ನು ಆರೋಪಿಗಳಿಂದ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಮಾರ್ಚ್ 29 ರಂದು ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದರು. ಜೊತೆಗೆ ಆರೋಪಿಗಳ ಬಂಧನಕ್ಕೆ ಸಹಾಯವಾಗಬಲ್ಲ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿತ್ತು.